ವಿಧಿವಶರಾದ ಅಪ್ಪುಗೆ ಸಿನಿಮಾಸಿರಿಯಿಂದ ನುಡಿನಮನ

ದಾವಣಗೆರೆ.ನ.೩;  ನಾಡಿನ ಮೇರು ವ್ಯಕ್ತಿತ್ವದ ಚಲನಚಿತ್ರ ನಟ ಪುನೀತ್ ರಾಜಕುಮಾರ್ ಇತ್ತೀಚಿಗೆ ಅಸ್ತಂಗತರಾಗಿದ್ದು ದಾವಣಗೆರೆಯ ಚಲನಚಿತ್ರ ಅಭಿಮಾನಿಗಳ ಕ್ರಿಯಾತ್ಮಕ ಸಂಸ್ಥೆ “ಸಿನಿಮಾ ಸಿರಿ”ಯಿಂದ ನಗರದ ಶಿವಯೋಗಿ ಮಂದಿರದ ಒಳಾಂಗಣದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ನುಡಿನಮನ, ಶ್ರದ್ಧಾಂಜಲಿ ಅರ್ಪಿಸಲಾಯಿತು.ಸಂಸ್ಥೆಯ ಕೋಶಾಧ್ಯಕ್ಷರಾದ ಮಂಜುನಾಥ ಸ್ವಾಮಿ ಮಾತನಾಡಿ, ದೈಹಿಕವಾಗಿ ನಮ್ಮನ್ನು ಅಗಲಿದ ಅಪ್ಪು ಮಾನವೀಯ ಮೌಲ್ಯಗಳ ಸಮಾಜಸೇವೆಯೊಂದಿಗೆ ವೈಶಿಷ್ಟ ವ್ಯಕ್ತಿತ್ವದೊಂದಿಗೆ ಕೋಟಿ, ಕೋಟಿ ಜನರ ಅವರ ಅಭಿಮಾನಿಗಳ ಹೃದಯಲ್ಲಿ ನೆಲೆಸಿದ್ದಾರೆ. ಅವರ ಈ ಆದರ್ಶ ಗುಣಗಳು ಇತರ ನಟ-ನಟಿಯರಿಗೆ, ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಅವರ ಸಾಧನೆ ವರ್ಣಿಸಲು ಶಬ್ದಗಳೇ ಇಲ್ಲ ಎಂದು ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು.ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಸಾಲಿಗ್ರಾಮ ಗಣೇಶ್ ಶೆಣೈ ಮಾತನಾಡಿ, ಅನಿರೀಕ್ಷಿತವಾಗಿ ದಿಢೀರ್ ಅಸ್ತಂಗತರಾದ ಅಪ್ಪುರವರ ಅಭಿಮಾನಿಗಳಿಗೆ ಆ ದುಃಖವನ್ನು ಸಹಿಸಲು ಅಸಾಧ್ಯ. ಚಲನಚಿತ್ರ ನಟನೆಗಷ್ಟೇ ಸೀಮಿತವಾಗದ ಅವರ ಜೀವನ ಸಮಾಜ ಮುಖೀ ಸತ್ಕಾರ್ಯ, ಸಾಧನೆ ಒಂದು ದಾಖಲೆ. ಕೇವಲ ಕರ್ನಾಟಕಕ್ಕೆ ಅಷ್ಟೇ ಅಲ್ಲದೇ ಹೊರ ರಾಜ್ಯ, ಹೊರ ದೇಶಗಳಲ್ಲೂ ಅವರ ಅಭಿಮಾನಿಗಳ ಮಹಾಪೂರ ಒಂದು ವಿಶೇಷತೆ. ಇಂತಹ ಪುಣ್ಯ ಪುರುಷ ಕನ್ನಡ ಅಭಿಮಾನಿಗಳ ಮನಸ್ಸುಗಳಿಗೆ ಅಜರಾಮರರಾದ ಇವರು ಮತ್ತೆ ಈ ಕನ್ನಡ ನಾಡಿನಲ್ಲಿ ಹುಟ್ಟಿ ಬರಲಿ ಎಂದು ತಮ್ಮ ಭಾವನೆ ವ್ಯಕ್ತಪಡಿಸಿದರು. ಒಂದು ನಿಮಿಷ ಮೌನಾಚರಣೆ ಮಾಡಿ, ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಂಸ್ಥೆಯ ಪದಾಧಿಕಾರಿಗಳಾದ ಆರ್.ಟಿ.ಮೃತ್ಯುಂಜಯ, ಗಜಾನನ ಭೂತೆ, ಸುರಭಿ ಶಿವಮೂರ್ತಿ, ಭಾವನ್ನಾರಾಯಣ, ಮಲ್ಲಿಕಾರ್ಜುನ ಮುಂತಾದವರು ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಂ.ಜಿ. ಜಗದೀಶ್‌ರವರು ಮೊದಲಿಗೆ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.