ವಿಧಾನ ಸೌಧವೂ ಮಾಲ್ ಆಗಿ ಪರಿವರ್ತನೆಯಾಗಿದೆ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.26:- ವಿಧಾನ ಸೌಧವೂ ಮಾಲ್ ಆಗಿ ಪರಿವರ್ತನೆಯಾಗಿಬಿಟ್ಟಿದೆ. ಅಲ್ಲಿ ಏನುಬೇಕಾದರೂ ಕೊಳ್ಳಬಹುದು, ಏನನ್ನಾದರೂ ಮಾರಬಹುದು ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ವಿಷಾದ ವ್ಯಕ್ತಪಡಿಸಿದರು.
ಮೈಸೂರಿನ ಕನ್ನಡ ಚಳವಳಿ ಕೇಂದ್ರ ಸಮಿತಿ ಹಾಗೂ ಕರ್ನಾಟಕ ಸೇನಾ ಪಡೆಯ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯದ ಏಳು ಕೋಟಿ ಜನರ ಪ್ರಾಧಿಕಾರವಾಗಿರುವ ಹಾಗೂ ಭರವಸೆಯ ಕೇಂದ್ರವಾಗಿರುವ ವಿಧಾನಸೌಧದಲ್ಲಿ ಈ ಹಿಂದೆ ಎಂತಹ ನಾಯಕರು, ಮುತ್ಸದ್ಧಿಗಳು ಆಡಳಿತ ನಡೆಸಿದ್ದರು. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯನಂತಹವರು ಓಡಾಡಿದ ಜಾಗದಲ್ಲಿ ಈಗ ನನ್ನನ್ನೂ ಸೇರಿಸಿಕೊಂಡಂತೆ ಎಲ್ಲ ಪಕ್ಷಗಳ ರಾಜಕೀಯ ನಾಯಕರ ಧೋರಣೆಯಿಂದಾಗಿ ಮಾರುವ-ಕೊಳ್ಳುವ ವ್ಯವಸ್ಥೆ ಬಂದುಬಿಟ್ಟಿದೆ. ಕನ್ನಡವನ್ನೂ ಮಾರಬಹುದು, ಸಂಸ್ಕೃತಿಯನ್ನೂ ಮಾರಬಹುದು ಎಂದು ವಿಶ್ವನಾಥ್ ಪ್ರಸ್ತುತ ಸ್ಥಿತಿಯ ಬಗ್ಗೆ ವ್ಯಂಗ್ಯವಾಡಿದರು.
ಕನ್ನಡ ಓದಲು ಹಾಗೂ ಬರೆಯಲು ಬಾರದವರನ್ನು ಶಾಲಾ ಶಿಕ್ಷಣ ಮಂತ್ರಿಯನ್ನಾಗಿ ಮಾಡಲಾಗಿದೆ. ಇದರಿಂದ ಏನು ಸಾಧನೆ ಮಾಡಿದಂತೆ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿರುವವರು, ಅಂತಹವರು ಕನ್ನಡ ಬಾರದವರನ್ನು ಶಿಕ್ಷಣ ಸಚಿವರನ್ನಾಗಿ ಮಾಡಿರುವುದು ಭಾಷೆ ಹಾಗೂ ಸಂಸ್ಕೃತಿಗೆ ಅವಮಾನ. ಅಲ್ಲದೇ ಬಂಗಾರಪ್ಪನವರ ಮಗನಾಗಿ ಅವರಿಗೂ ಕೆಟ್ಟ ಹೆಸರು ತರುತ್ತಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ನವರ ಕಾರ್ಯವೈಖರಿಯ ಬಗ್ಗೆ ಜರಿದ ವಿಶ್ವನಾಥ್, ಶಿಕ್ಷಣ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಯಾವ-ಯಾವ ಇಲಾಖೆಗಳನ್ನು ಯಾರಿಗೆ ನೀಡಬೇಕು ಎನ್ನುವ ಪ್ರಜ್ಞೆ ಆಡಳಿತ ನಡೆಸುವವರಿಗೆ ಇರಬೇಕು. ಲೋಕೋಪಯೋಗಿ, ನೀರಾವರಿ, ಅಬಕಾರಿ ಇಂತಹ ಇಲಾಖೆಗಳನ್ನು ಯಾರಿಗಾದರೂ ನೀಡಲಿ. ಆದರೆ ಶಿಕ್ಷಣ, ಭಾಷೆ, ಸಂಸ್ಕೃತಿ, ಆರೋಗ್ಯ ಇಂತಹ ವಿಷಯಗಳು ಇರುವ ಇಲಾಖೆಯನ್ನು ಸರಿಯಾದವರಿಗೆ ನೀಡಿದಾಗ ಮಾತ್ರ ಅದಕ್ಕೊಂದು ಗತ್ತು ಬರುತ್ತದೆ. ಪ್ರಸ್ತುತ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿರುವರಿಗೆ ಕನ್ನಡವೂ ಇಲ್ಲ, ಸಂಸ್ಕೃತಿಯೂ ಇಲ್ಲ ಎಂದರು.
ಸರ್ಕಾರಿ ಶಾಲೆಗಳು ಬಾಗಿಲು ಹಾಕುತ್ತಿವೆ. ಇದನ್ನು ಯಾರು ಕೇಳುತ್ತಿಲ್ಲ. ಬರೀ ಕನ್ನಡ-ಕನ್ನಡ ಎಂದು ಮಾತನಾಡಿದರೇ ಹೇಗೆ. ಕನ್ನಡ ಪರ ಹೋರಾಟಗಾರರು ಈ ವಿಚಾರವಾಗಿ ಧ್ವನಿ ಎತ್ತಬೇಕು. ಸರ್ಕಾರಿ ಶಾಲೆಯ ಸಮಸ್ಯೆ ಸರಿಪಡಿಸಲು ಸರ್ಕಲ್ಗಳಲ್ಲಿ ನಿಂತು ಪ್ರತಿಭಟನೆ ಮಾಡಬೇಕು. ಬೇರೆ-ಬೇರೆ ಬೇಡದ ವಿಚಾರಗಳಿಗೆ ತಲೆಕೆಡಿಸಿಕೊಳ್ಳುವ ಎಲ್ಲರೂ ಸರ್ಕಾರಿ ಶಾಲೆಗಳ ಬಗ್ಗೆ ಮಾತನಾಡುತ್ತಿಲ್ಲ. ಶಾಸಕರಿಗೂ ವಾಸ್ತವದ ಅರಿವು ಇಲ್ಲ. ರಾಜ್ಯದ ಇಂದಿನ ಸ್ಥಿತಿ ಮನೋರಂಜನ ಕಾರ್ಯಕ್ರಮವಾಗಿದೆ. ಸರ್ಕಾರಕ್ಕೂ ಗಂಭೀರತೆ ಇಲ್ಲ. ರಾಜಕಾರಣಿಗಳಿಗೂ ಗಾಂಭೀರ ಇಲ್ಲ. ಸಮಾಜಕ್ಕೂ ಗಾಂಭೀರ ಇಲ್ಲ. ಗಂಭೀರತೆ ಕಳೆದುಕೊಂಡಿರುವ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಇದು ಸರಿಯಾಗಬೇಕಾದರೇ ಚಳವಳಿಗಳು ಜೀವಂತವಾಗಿ ಇರಬೇಕು ಎಂದರು.
ಇದೇ ಸಂದರ್ಭದಲ್ಲಿ ಡಾ.ಬಿ.ಆರ್.ನಟರಾಜ್ ಜೋಯಿಷ್, ವರುಣಾ ಮಹೇಶ್, ಎಸ್.ಆರ್.ರವಿಕುಮಾರ್, ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ ಡಾ.ರಘುರಾಂ ವಾಜಪೇಯಿ, ಕರಾಮುವಿ ಡೀನ್ ಡಾ.ಎನ್.ಲಕ್ಷ್ಮೀ, ಮೂಗೂರು ನಂಜುಂಡಸ್ವಾಮಿ, ತೇಜಸ್ ಲೋಕೇಶ್ಗೌಡ ಹಾಜರಿದ್ದರು.