ವಿಧಾನ ಪರಿಷತ್ ಸ್ಥಾನಕ್ಕೆ ಸುಭಾಷ್ ರಾಠೋಡ್ ಆಯ್ಕೆಗೆ ಆಗ್ರಹ

ಕಲಬುರಗಿ,ಜೂ.7: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಭಾಷ್ ರಾಠೋಡ್ ಅವರಿಗೆ ರಾಜ್ಯ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಆಯ್ಕೆಗೊಳಿಸಬೇಕು ಎಂದು ಕಾಳಗಿ ಮತ್ತು ಕೋಡ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕೋಶಾಧ್ಯಕ್ಷ ವೀರಭದ್ರಯ್ಯ ಸಾಲಿಮಠ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಭಾಷ್ ರಾಠೋಡ್ ಅವರು ಚಿಂಚೋಳಿ ತಾಲ್ಲೂಕಿನಲ್ಲಿ ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ. ಕಳೆದ 2019ರ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ. ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಕೇವಲ 858 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಸೋತರೂ ಸಹ ಎದೆಗುಂದದೆ ತಾಲ್ಲೂಕಿನ ಪಕ್ಷದ ಬೆಳವಣಿಗೆಗಾಗಿ ಕಾರ್ಯಕರ್ತರ ಜೊತೆಗೂಡಿ ಶ್ರಮಿಸುತ್ತಿದ್ದಾರೆ ಎಂದರು.
ಚಿಂಚೋಳಿ ತಾಲ್ಲೂಕಿನಲ್ಲಿ ಪಕ್ಷ ಬೆಳೆಸಲು ಅವರ ಸೇವೆ ಅನನ್ಯವಾಗಿದೆ. ಅವರ ಸೇವೆಯನ್ನು ಗುರುತಿಸಿ ರಾಜ್ಯ ವಿಧಾನ ಪರಿಷತ್ ಸದಸ್ಯತ್ವ ಇಲ್ಲವೇ ಯಾವುದಾದರೂ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ನಾಮ ನಿರ್ದೇಶನ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂಬಂಧ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ. ಶರಣಪ್ರಕಾಶ್ ಪಾಟೀಲ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಸವರಾಜ್ ತುಪ್ಪದ್, ಜಾವಿದ್ ಅಫಖಾನ್, ವಿಜಯಕುಮಾರ್ ತುಮಕೂನ್, ದೇಸು ಚವ್ಹಾಣ್, ಮಲ್ಲಿಕಾರ್ಜುನ್ ಮೂಡೂಳ್, ಗಿರಿಮಲ್ಲಪ್ಪ ಬೂಸೂನ್, ಮೆಹತಾಬ್ ಖುರೇಶಿ ಮುಂತಾದವರು ಉಪಸ್ಥಿತರಿದ್ದರು.