ವಿಧಾನ ಪರಿಷತ್ ಸಭಾಪತಿ ರಾಜೀನಾಮೆ ಹೈಕಮಾಂಡ್ ನಿರ್ಧಾರಕ್ಕೆ

ಹರಪನಹಳ್ಳಿ, ಜ.07: ವಿಧಾನ ಪರಿಷತ್ ಸಭಾಪತಿ ರಾಜೀನಾಮೆ ಕುರಿತು ಹೈಕಮಾಂಡ್ ನಿರ್ಧರಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಹೊಳಿ ಹೇಳಿದರು.
ಹರಪನಹಳ್ಳಿ ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಪ್ರತಿಕ್ರಿಸಿದ ಅವರು ರಾಜ್ಯದಲ್ಲಿ ಯಡಿಯೂರಪ್ಪ ಸೇರಿದಂತೆ ಯಾವುದೇ ನಾಯಕರೂ ಇದ್ದರೂ ಬಿಜೆಪಿ ವಿರುದ್ದ ಹೋರಾಟ ನಿರಂತರವಾಗಿರಲಿದೆ ಎಂದ ಅವರು ಉತ್ತರಿಸಿದರು.
ಗೋಹತ್ಯೆ ನಿಷೇಧ ಕಾಯ್ದೆ ವಿರುದ್ದ ಕಾಂಗ್ರೆಸ್ ಪಕ್ಷ ಹೋರಾಟ ಮಾಡುವುದಿಲ್ಲ. ಗೋಹತ್ಯೆ ನಿಷೇಧ ಕಾಯ್ದೆ ಯಾವುದೋ ಒಂದು ಸಮುದಾಯವನ್ನು ಹೆಸರಿಸಲು ಮಾಡುತ್ತಿರುವ ತಂತ್ರವಾಗಿದೆ. ಸಂಪೂರ್ಣ ನಿರ್ಬಂಧ ಕಾನೂನಿನಲ್ಲಿ ಇಲ್ಲ. 1965ರಲ್ಲಿಯೇ ಜವಾಹರಲಾಲ್ ನೆಹರು ಅವರು ಇದೇ ಕಾನೂನು ತಂದಿದ್ದರು. ಇದೇನೂ ಹೊಸದಲ್ಲ, ಈ ಕಾನೂನಿನಲ್ಲಿ ಹೆದರುವಂತಹ ಯಾವುದೇ ಅಂಶಗಳಿಲ್ಲ ಎಂದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೊರತುಪಡಿಸಿ ಉಳಿದ ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ದ ಮಾತನಾಡುತ್ತಿಲ್ಲವಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಸಿದ ಅವರು ಎಲ್ಲಾ ನಾಯಕರು ಮಾತನಾಡುತ್ತಾರೆ ಆದರೆ ಅವರಿಗೆ ಸಿಕ್ಕಂತಹ ಪ್ರಚಾರ ಬೇರೆ ನಾಯಕರಿಗೆ ಸಿಕ್ಕಿರುವುದಿಲ್ಲ, ಸಿದ್ದರಾಮಯ್ಯನವರಿಗೆ ಹೆಚ್ಚಿನ ಅನುಭವವಿರುವುದರಿಂದ ಹೆಚ್ಚು ಮಾತನಾಡುತ್ತಾರೆ ಎಂದು ತಿಳಿಸಿದರು.
ಕ್ರಿಯಾಶೀಲ ವಿರೋಧ ಪಕ್ಷವಾಗಿ ಕಾಂಗ್ರೆಸ್ ಕೆಲಸ ಮಾಡುತ್ತಿಲ್ಲ ಎನ್ನುವ ಕುರಿತು ಪ್ರತಿಕ್ರಯಿಸಿ ನಾವು ಮೀರಿ ಪ್ರಯತ್ನ ಮಾಡುತ್ತಿದ್ದೇವೆ. ಬರಗಾಲ, ಪ್ರವಾಹ ಸಮಸ್ಯೆಗಳು, ಮನೆಗಳು ವಿತರಣೆ ಸೇರಿದಂತೆ ಅನೇಕ ವಿಷಯಗಳ ಕುರಿತು ಹೋರಾಟ ನಡೆಸಿದ್ದೇವೆ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿಲ್ಲದಿದ್ದರೂ ಹೆಚ್ಚು ಸ್ಥಾನಗಳು ಬಂದಿವೆ. ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಹಿಂದೆ ಬಿದ್ದಿಲ್ಲ, ರಾಜಕಾರಣದಲ್ಲಿ ಏಳು-ಬೀಳು ಸಹಜ. ರಾಜ್ಯದಲ್ಲಿ ಕಾಂಗ್ರೆಸ್ ಸದೃಢವಾಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.