ವಿಧಾನ ಪರಿಷತ್ ಚುನಾವಣೆ: 94.40% ಮತದಾನ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಜೂ.04: ಕರ್ನಾಟಕ ವಿಧಾನ ಪರಿಷತ್‍ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ 94.40% ಮತದಾನ ನಡೆದಿದೆ. ಕ್ಷೇತ್ರದಲ್ಲಿ ಒಟ್ಟು 464 ಮತದಾರರು ನೊಂದಣಿಯಾಗಿದ್ದು ಇವರುಗಳ ಪೈಕಿ 312 ಪುರುಷ ಮತದಾರರು ಹಾಗೂ 127 ಮಹಿಳಾ ಮತದಾರರು ಸೇರಿದಂತೆ ಒಟ್ಟು 439 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಸೋಮವಾರ ಬೆಳಿಗ್ಗೆ 08 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಮುಖಂಡರು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮತ್ತು ಬಿಎಸ್‍ಪಿ ಅಭ್ಯರ್ಥಿ ಮುಖಂಡರು ಪ್ರತ್ಯೇಕವಾಗಿ ಮತಯಾಚನೆಯಲ್ಲಿ ತೊಡಗಿದ್ದರು. ಮೈತ್ರಿ ಅಭ್ಯರ್ಥಿ ಪರವಾಗಿ ಶಾಸಕ ಹೆಚ್.ಟಿ.ಮಂಜು, ಮಂಡ್ಯ ಡಿಸಿಸಿ ಬ್ಯಾಂಕ್ ಉಪಾದ್ಯಕ್ಷ ಹೆಚ್.ಕೆ.ಅಶೋಕ್, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಧನಂಜಯ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸಾರಂಗಿನಾಗರಾಜು, ಬಿಜೆಪಿ ಮುಖಂಡರುಗಳು ಸಮನ್ವಯತೆಯಿಂದ ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಕೆಪಿಸಿಸಿ ಸದಸ್ಯ ಸುರೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಂದ್ರಕುಮಾರ್, ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ ಸೇರಿದಂತೆ ಹಲವರು ಅಂತಿಮ ಕ್ಷಣದ ವರೆಗೂ ಮತಯಾಚನೆ ಮಾಡುವ ಮೂಲಕ ಗಮನ ಸೆಳೆದರು.
ಕಳೆದ ಒಂದು ವಾರದಿಂದಲೂ ನಡೆದ ಪ್ರಚಾರ ಸಭೆಗಳು ಮತ್ತು ಶಾಲೆಗಳ ಭೇಟಿಯ ವೇಳೆಯಲ್ಲಿ ಅಭ್ಯರ್ಥಿಗಳು ತಾಲ್ಲೂಕಿಗೆ ಆಗಮಿಸಿ ಮತದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡಿದ್ದರು. ನಂತರ ಪಕ್ಷದ ಬೆಂಬಲಿಗರು, ಮುಖಂಡರುಗಳು ತಮ್ಮತಮ್ಮ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದ್ದರು.