ವಿಧಾನ ಪರಿಷತ್ ಚುನಾವಣೆ: 144 ನಿಷೇಧಾಜ್ಞೆ ಜಾರಿ

ಕಲಬುರಗಿ,ಡಿ.06:ಕರ್ನಾಟಕ ವಿಧಾನ ಪರಿಷತ್ತಿನ 02-ಗುಲಬರ್ಗಾ ಕ್ಷೇತ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇದೇ ಡಿಸೆಂಬರ್ 10 ರಂದು ಮತದಾನವು ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನ ಮುಕ್ತಾಯವಾಗುವ 72 ಗಂಟೆಗಳ ಮುನ್ನ ಅಂದರೆ ಇದೇ ಡಿಸೆಂಬರ್ 7ರ ಸಂಜೆ 6 ಗಂಟೆಯಿಂದ ಡಿಸೆಂಬರ್ 11ರ ಬೆಳಿಗ್ಗೆ 6 ಗಂಟೆಯವರೆಗೆ 5 ಜನಕ್ಕಿಂತ ಹೆಚ್ಚಿನ ಜನರು ಅನಧಿಕೃತವಾಗಿ ಗುಂಪು ಸೇರುವುದು ಹಾಗೂ ಬಹಿರಂಗ ಚುನಾವಣೆ ಸಭೆಗಳನ್ನು ಮಾಡುವುದನ್ನು ನಿಷೇಧಿಸಿ ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 144 ರನ್ವಯ ಕಲಬುರಗಿ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಕಲಬುರಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ವಿ.ವಿ. ಜ್ಯೋತ್ಸ್ನಾ ಅವರು ಆದೇಶ ಹೊರಡಿಸಿದ್ದಾರೆ.

ಈ ಆದೇಶ ಉಲ್ಲಂಘಿಸಿದ್ದಲ್ಲಿ ಅಂತಹವರ ಮೇಲೆ ಕಾನೂನಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇನ್ನು ಬಹಿರಂಗ ಪ್ರಚಾರÀ ಮುಕ್ತಾಯವಾದ ನಂತರ ಸಾರ್ವಜನಿಕವಾಗಿ ಬಹಿರಂಗ ಸಭೆ ಹಾಗೂ ಪ್ರಚಾರ ಮಾಡುವುದನ್ನು ಹಾಗೂ ಮನೆ ಮನೆ ಪ್ರಚಾರ ಸಂದರ್ಭದಲ್ಲಿ ಅಭ್ಯರ್ಥಿ ಮತ್ತು ಅವರ ಜೊತೆಗೆ ಗರಿಷ್ಠ 4 ಜನ ಸೇರಿದಂತೆ ಒಟ್ಟು 5 ಜನ ಮೀರದಂತೆ ಪ್ರಚಾರ ಮಾಡಲು ಅವಕಾಶ ಇರುತ್ತದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.