ವಿಧಾನ ಪರಿಷತ್ ಚುನಾವಣೆ: ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಆಯುಧಗಳನ್ನು ಠೇವಣಿ ಇಡಲು ಸೂಚನೆ

ಕಲಬುರಗಿ,ನ.18:2021ರ ವಿಧಾನ ಪರಿಷತ್ ಚುನಾವಣೆ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ) ಯನ್ನು ಶಾಂತಿಯುತವಾಗಿ ಜರುಗಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುವಂತೆ ಕಲಬುರಗಿ ಜಿಲ್ಲೆಯಾದ್ಯಂತ ಹಾಗೂ ಯಾದಗಿರಿ ಜಿಲ್ಲೆಯ ಚುನಾವಣಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ತಾಲೂಕಿನಲ್ಲಿ ಆಯುಧಗಳನ್ನು ಹೊಂದಿರುವ ಸಾರ್ವಜನಿಕರು ತಮ್ಮ ಎಲ್ಲಾ ಆಯುಧ (ಫೈರ್ ಆಮ್ರ್ಸ್)ಗಳನ್ನು (2021ರ ಡಿಸೆಂಬರ್ 16ರವರೆಗೆ) ಚುನಾವಣಾ ಪ್ರಕ್ರಿಯೇ ಮುಕ್ತಾಯವಾಗುವರೆಗೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡಬೇಕೆಂದು ಭಾರತೀಯ ಆಯುಧ ಕಾಯ್ದೆ 1959ರ ಕಲಂ 24ಎ(1) ರನ್ವಯ ಗುಲಬರ್ಗಾ ವಿಧಾನ ಪರಿಷತ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)ದ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ವಿ.ವಿ. ಜ್ಯೋತ್ಸ್ನಾ ಅವರು ಆದೇಶ ಹೊರಡಿಸಿದ್ದಾರೆ.
ಕಲಬುರಗಿ ಜಿಲ್ಲೆಯಾದ್ಯಂತ ಹಾಗೂ ಯಾದಗಿರಿ ಜಿಲ್ಲೆಯ ಚುನಾವಣಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ತಾಲೂಕಿನಲ್ಲಿ ಆಯುಧಗಳನ್ನು ಹೊಂದಿರುವ ಸಾರ್ವಜನಿಕರು ತಮ್ಮ ಎಲ್ಲಾ ಆಯುಧ (ಫೈರ್ ಆಮ್ರ್ಸ್) ಗಳನ್ನು (ರಾಷ್ಟ್ರೀಕೃತ ಬ್ಯಾಂಕ್‍ಗಳು ಹಾಗೂ ಭಾರತ ರಿಸರ್ವ್ ಬ್ಯಾಂಕ್‍ದಿಂದ ಅನುಮೋದಿತ ಶೆಡ್ಯೂಲ್ ಬ್ಯಾಂಕ್‍ಗಳ ಸೆಕ್ಯೂರಿಟಿ ಗಾರ್ಡ್‍ಗಳ ಆಯುಧಗಳನ್ನು ಹೊರತುಪಡಿಸಿ) ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ 2021ರ ಡಿಸೆಂಬರ್ 16 ರವರೆಗೆ ಠೇವಣಿ ಇಡಬೇಕು. ಯಾವುದೇ ಆಯುಧ ಲೈಸೆನ್ಸ್‍ದಾರರು 2021ರ ಡಿಸೆಂಬರ್ 16 ರವರೆಗೆ ತಮ್ಮ ಆಯುಧಗಳನ್ನು ಸಾರ್ವಜನಿಕ ಸ್ಥಳದಲ್ಲಿ ಹೊತ್ತು ಒಯ್ಯುವುದನ್ನು ಮತ್ತು ಪ್ರದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.