ವಿಧಾನ ಪರಿಷತ್ ಚುನಾವಣೆ; ಮತಚಲಾಯಿಸಿದ ಪದವೀಧರರು


ದಾವಣಗೆರೆ ಅ.೨೮; ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣೆ-೨೦೨೦ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ಮತದಾನ ಚುರುಕಿನಿಂದ ಸಾಗಿತ್ತು. ಜಿಲ್ಲೆಯ ದಾವಣಗೆರೆ, ಹರಿಹರ ಮತ್ತು ಜಗಳೂರು ಮತಕ್ಷೇತ್ರಗಳಲ್ಲಿ ಒಟ್ಟು ೨೯ ಮತಗಟ್ಟೆ ಕೇಂದ್ರಗಳಿವೆ. ೧೨೮೧೯ ಪುರುಷರು ಹಾಗೂ ೮೧೪೩ ಮಹಿಳೆಯರು ಸೇರಿದಂತೆ ಒಟ್ಟು ೨೦೯೬೨ ಮತದಾರರು ಇದ್ದು ಮಧ್ಯಾಹ್ನ ೧ ಗಂಟೆ ವೇಳೆಯವರೆಗೂ ಚುರುಕಿನಿಂದಲೇ ಮತದಾನ ಪ್ರಕ್ರಿಯೆ ನಡೆದಿದೆ.
ಪದವೀಧರ ಕ್ಷೇತ್ರ ದಾವಣಗೆರೆ ನಗರದಲ್ಲಿ ೧೭ ಮತಗಟ್ಟೆ, ೭೪೩೯ ಪುರುಷರು ಹಾಗೂ ೫೪೨೯ ಮಹಿಳೆಯರು ಸೇರಿದಂತೆ ಒಟ್ಟು ೧೨೮೬೮ ಮತದಾರರು ಇದ್ದಾರೆ. ಹಾಗೂ ದಾವಣಗೆರೆ ಗ್ರಾಮಾಂತರದಲ್ಲಿ ೪ ಮತಗಟ್ಟೆ ಕೆಂದ್ರಗಳಿದ್ದು, ೧೪೧೨ ಪುರುಷರು ಹಾಗೂ ೬೬೪ ಮಹಿಳೆಯರು ಸೇರಿದಂತೆ ಒಟ್ಟು ೨೦೭೬ ಮತದಾರರು ಇದ್ದಾರೆ.ಹರಿಹರದಲ್ಲಿ ೪ ಮತಗಟ್ಟೆ ಕೇಂದ್ರಗಳಿದ್ದು, ೨೫೫೮ ಪುರುಷರು ಹಾಗೂ ೧೫೧೬ ಮಹಿಳೆಯರು ಸೇರಿದಂತೆ ಒಟ್ಟು ೪೦೭೪ ಮತದಾರರು. ಜಗಳೂರು ತಾಲ್ಲೂಕಿನಲ್ಲಿ ೩ ಮತಗಟ್ಟೆ ಕೇಂದ್ರ, ೧೪೧೦ ಪುರುಷರು ಹಾಗೂ ೫೩೪ ಮಹಿಳೆಯರು ಸೇರಿದಂತೆ ಒಟ್ಟು ೧೯೪೪ ಮತದಾರರಿದ್ದಾರೆ.ಇಂದು ಬೆಳಗ್ಗೆ ೧೦ ಗಂಟೆ ವೇಳೆಗೆ ಶೇ ೫ ರಷ್ಟು ಮತದಾನ ನಡೆದಿದ್ದು ಸುಮಾರು ೧೧೦೬ ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನದ ಮುನ್ನ ಪ್ರತಿ ಮತಗಟ್ಟೆಗಳಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಸಿಬ್ಬಂದಿಗಳು ಪ್ರತಿ ಮತದಾರರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗಿದೆ. ಎಲ್ಲಾ ಮತಗಟ್ಟೆ ಕೇಂದ್ರದ ಕೊಠಡಿಗಳಲ್ಲಿ ಸ್ಯಾನಿಟೈಸರ್,ಪಲ್ಸ್ ಆಕ್ಸುಮೀಟರ್ ಹಾಗೂ ಕೈಗವಸು ನೀಡಲಾಗಿದೆ. ಕೋರೊನಾ ಹಿನ್ನೆಲೆಯಲ್ಲಿ ಎಲ್ಲಾ ಸೂಕ್ತ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಮತದಾನಕ್ಕೆ ಮತದಾರರು ಕಡ್ಡಾಯವಾಗಿ ಮಾಸ್ಕ್‌ನೊಂದಿಗೆ ಬಂದು ಮತದಾನ ಮಾಡಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಸೂಚಿಸಲಾಗಿತ್ತು.