ವಿಧಾನ ಪರಿಷತ್ ಚುನಾವಣೆ : ಬಿಜೆಪಿ ಅಭ್ಯರ್ಥಿ ಪರ ಗೆಲುವಿಗೆ ಪೂರ್ವಭಾವಿ ಸಭೆ

ಒಗ್ಗಟ್ಟಿನಿಂದ ಚುನಾವಣೆ ನಿರ್ವಹಿಸಿದರೇ ಗೆಲುವು ಖಚಿತ – ಆಚಾರ್
ರಾಯಚೂರು.ನ.೨೩- ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಸವಾಲೊಡ್ಡುವ ರೀತಿಯಲ್ಲಿ ಚುನಾವಣೆ ನಿರ್ವಹಿಸುವ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಪ್ರತಿಯೊಬ್ಬರು ಪ್ರಾಮಾಣಿಕತೆಯಿಂದ ಶ್ರಮ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅವರು ಹೇಳಿದರು.
ಅವರಿಂದು ನಗರದ ಹೊರ ವಲಯದ ಹರ್ಷಿತಾ ಗಾರ್ಡನ್‌ನಲ್ಲಿ ಆಯೋಜಿಸಿದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ಸಿನವರು ಅನೇಕ ತಂತ್ರಗಾರಿಕೆ ಹೊಂದಿರುತ್ತಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಸವಾಲ್ ಹಾಕುವ ರೀತಿಯಲ್ಲಿ ನಾವು ಚುನಾವಣೆ ನಿರ್ವಹಿಸಬೇಕು. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ನಾವು ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕು. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ದೇಶ ಅತ್ಯಂತ ಸಮರ್ಥವಾಗಿ, ಪ್ರಬಲವಾಗಿ ಜಗತ್ತಿನಲ್ಲಿ ದೊಡ್ಡಣ್ಣನಾಗಿ ನಿಂತಿದೆ. ೧೧೦ ಕೋಟಿ ಜನರಿಗೆ ಕೊರೊನಾ ಲಸಿಕೆ ಹಾಕುವ ಮೂಲಕ ಇತಿಹಾಸ ದಾಖಲಿಸಲಾಗಿದೆ. ಮೋದಿ ಅವರ ಅಭಿವೃದ್ಧಿ ಕಾರ್ಯಗಳು ಮತ್ತು ರಾಜ್ಯ ಸರ್ಕಾರದ ಯೋಜನೆಗಳು ನಮ್ಮ ಗೆಲುವಿಗೆ ನೆರವಾಗಲಿದೆ.
ಕಾಂಗ್ರೆಸ್ ದೇಶದಲ್ಲಿ ಸಂಪೂರ್ಣವಾಗಿ ತನ್ನ ಶಕ್ತಿಯನ್ನು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ನಮ್ಮ ಪಕ್ಷದ ಶಕ್ತಿಯ ಮುಂದೆ ಕಾಂಗ್ರೆಸ್ ಬಲ ಶೂನ್ಯ. ನಾವು ಎಲ್ಲರೂ ಒಂದಾಗಿ ಶ್ರಮಿಸುವ ಮೂಲಕ ಈ ಚುನಾವಣೆಯಲ್ಲಿ ಗೆಲುವು ಸಾಧ್ಯವೆಂದರು. ಪೊಲೀಯೋ ಲಸಿಕೆಗೆ ವಿದೇಶಗಳಿಂದ ಅವಲಂಬಿಸಬೇಕಾಯಿತು. ಆದರೆ, ಕೊರೊನಾ ಲಸಿಕೆಯನ್ನು ನಾವೇ ಆವಿಷ್ಕರಿಸಿದ್ದೇವೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಗ್ರಾಮ ಪಂಚಾಯತಿಗಳನ್ನು ಬಲಪಡಿಸಲು ಕೇಂದ್ರ, ರಾಜ್ಯ ಸರ್ಕಾರಗಳು ಅನುದಾನ ನೀಡಿವೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ, ಸ್ಥಳೀಯ ಜನಪ್ರತಿನಿಧಿಗಳು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಲಿವೆಂದು ಹೇಳಿದರು.
ಈ ಸಭೆಯಲ್ಲಿ ಸಂಸದರಾದ ರಾಜಾ ಅಮರೇಶ್ವರ ನಾಯಕ, ಕರಡಿ ಸಂಗಣ್ಣ, ಶಾಸಕರಾದ ಡಾ.ಶಿವರಾಜ ಪಾಟೀಲ್, ಕೆ.ಶಿವನಗೌಡ ನಾಯಕ ಅವರು ಮಾತನಾಡಿ, ಈ ಸಲ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತವೆಂದು ಹೇಳಿದರು.