ವಿಧಾನ ಪರಿಷತ್ ಚುನಾವಣೆ: ನಾಳೆ ಬೆಳಿಗ್ಗೆ 8 ರಿಂದ ಮತದಾನ:ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ

ಕಲಬುರಗಿ,ಡಿ.09:ಕರ್ನಾಟಕ ವಿಧಾನ ಪರಿಷತ್ (ಸ್ಥಳೀಯ ಸಂಸ್ಥೆ) ಚುನಾವಣೆ ಹಿನ್ನೆಲೆಯಲ್ಲಿ ಇದೇ ಡಿಸೆಂಬರ್ 10 ರಂದು ಬೆಳಿಗ್ಗೆ 8 ರಿಂದ ಸಾಯಂಕಾಲ 4 ಗಂಟೆಯವರೆಗೆ ಮತದಾನ ನಡೆಯಲಿದ್ದು, ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ತಿಳಿಸಿದ್ದಾರೆ.
ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳು ಸೇರಿದಂತೆ ಒಟ್ಟು 391 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ಕಲಬುರಗಿ ಜಿಲ್ಲೆಯಲ್ಲಿ 265 ಹಾಗೂ ಯಾದಗಿರಿಯಲ್ಲಿ 126 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಕಲಬುರಗಿ ಜಿಲ್ಲೆಯ 256 ಗ್ರಾಮ ಪಂಚಾಯಿತಿಗಳು ಹಾಗೂ ಯಾದಗಿರಿ ಜಿಲ್ಲೆಯ 122 ಗ್ರಾಮ ಪಂಚಾಯಿತಿಗಳು ಸೇರಿದಂತೆ ಒಟ್ಟು 378 ಗ್ರಾಮ ಪಂಚಾಯಿತಿಗಳ ಸದಸ್ಯರು, 8 ಪುರಸಭೆಗಳ ಸದಸ್ಯರು, 4 ನಗರಸಭೆಗಳ ಸದಸ್ಯರು ಹಾಗೂ ಒಂದು ಕಲಬುರಗಿ ಮಹಾನಗರ ಪಾಲಿಕೆಯ ಸದಸ್ಯರು ಮತ ಚಲಾಯಿಸಲಿದ್ದಾರೆ.
ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆ ಸೇರಿದಂತೆ ಒಟ್ಟು 7102 ಮತದಾರರು ಇದ್ದು, ಈ ಪೈಕಿ 3358 ಪುರುಷರು ಹಾಗೂ 3744 ಮಹಿಳಾ ಮತದಾರರು ಇದ್ದಾರೆ.
ಚುನಾವಣಾ ಕಾರ್ಯಕ್ಕಾಗಿ ಪಿ.ಆರ್.ಓ. 265, ಎ.ಪಿ.ಆರ್.ಓ. 265 ಮಂದಿ ನಿಯೋಜಿಸಲಾಗಿದ್ದು, ಇದಲ್ಲದೇ ಶೇ.10 ರಷ್ಟು ಪಿ.ಆರ್.ಓ. ಮತ್ತು ಶೇ.10 ರಷ್ಟು ಎ.ಪಿ.ಆರ್.ಓ.ಗಳನ್ನು ಕಾಯ್ದಿರಿಸಲಾಗಿದೆ.
ಈ ಚುನಾವಣೆಗೆ ಮತದಾನ ಸಿಬ್ಬಂದಿಗಳನ್ನು ಕರೆದೊಯ್ಯಲು ಒಟ್ಟು 108 ಖಾಸಗಿ ವಾಹನಗಳನ್ನು / ಶಾಲಾ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಂದು ಮತದಾನ ಕೇಂದ್ರಕ್ಕೆ 1 ಪಿಆರ್‍ಓ, 1 ಎಪಿಆರ್‍ಓ, ಶೇ. 10ರಷ್ಟು ಹೆಚ್ಚುವರಿಯಾಗಿ ಹಾಗೂ ಓರ್ವ ಗ್ರೂಪ್ ಡಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೇ ಗುರುತಿಸುವ ಅಧಿಕಾರಿಯನ್ನು ಸಹ ನೇಮಿಸಲಾಗಿದೆ.
ಚುನಾವಣಾ ಗುರುತಿನ ಚೀಟಿ (EPIC) ಅಥವಾ ಸ್ಥಳೀಯ ಸಂಸ್ಥೆಯಿಂದ ನೀಡಿದ ಗುರುತಿನ ಚೀಟಿ ಅಥವಾ ಭಾರತ ಚುನಾವಣಾ ಆಯೋಗವು ನಿಗದಿಪಡಿಸಿರುವ ದಾಖಲೆಗಳಲ್ಲಿ ಯಾವುದಾದರೊಂದು ಗುರುತಿನ ಚೀಟಿಯನ್ನು ಅಧ್ಯಕ್ಷಾಧಿಕಾರಿಗೆ ತೋರಿಸಿ ಮತ ಚಲಾಯಿಸಬಹುದಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬರಂತೆ ಮೈಕ್ರೊ ಅಬ್ಸರ್ವರ್‍ರನ್ನು ನೇಮಕ ಮಾಡಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ವಿಡಿಯೋ ಚೀತ್ರೀಕರಣ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.