ವಿಧಾನ ಪರಿಷತ್ ಚುನಾವಣೆ : ಕೊಪ್ಪಳದಲ್ಲಿ ಬಿಜೆಪಿ ತೀವ್ರ ಪ್ರಚಾರ

ರಾಯಚೂರು.ಡಿ.೦೪- ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಸಂಬಂಧಿಸಿ ಬಿಜೆಪಿಯ ಅಭ್ಯರ್ಥಿ ಪರ ಕೊಪ್ಪಳದಲ್ಲಿ ಪ್ರಚಾರ ಭರದಿಂದ ಸಾಗಿದೆ.
ನಿನ್ನೆ ಕುಕನೂರು ತಾಲೂಕಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಅವರು ಬಿರುಸಿನ ಪ್ರಚಾರ ನಡೆಸಿದರು. ಈ ಸಲ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತವೆಂದು ಕೆ.ಶಿವನಗೌಡ ನಾಯಕ ಹೇಳಿದರು. ಚುನಾವಣೆಗೆ ಇನ್ನೂ ಐದು ದಿನ ಮಾತ್ರ ಬಾಕಿಯಿದೆ. ನಾಳೆವರೆಗೂ ಕೊಪ್ಪಳ ಪ್ರಚಾರ ಪೂರ್ಣಗೊಳಿಸಿ, ನಂತರ ರಾಯಚೂರು ಜಿಲ್ಲೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಈಗಾಗಲೇ ಚುನಾವಣೆಗೆ ಸಂಬಂಧಿಸಿ ಎಲ್ಲಾ ಪೂರ್ವ ಸಿದ್ಧತೆ ಆರಂಭಗೊಂಡಿದ್ದವು. ಕಾಂಗ್ರೆಸ್, ಬಿಜೆಪಿ ಪಕ್ಷಗಳು ಈ ಚುನಾವಣೆ ಗೆಲುವಿಗಾಗಿ ಜಿದ್ದಾಜಿದ್ದಿ ಪೈಪೋಟಿಗಿಳಿದಿವೆ.
ಬಿಜೆಪಿಯ ಉಸ್ತುವಾರಿ ಸಚಿವರು ಸೇರಿದಂತೆ ಸಂಸದರು, ಶಾಸಕರು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಭಾರೀ ಪ್ರಯತ್ನಗಳಿಗೆ ಮುಂದಾಗಿದ್ದಾರೆ. ಸುಮಾರು ೪೦೦ ಕ್ಕೂ ಅಧಿಕ ಗ್ರಾಮ ಪಂಚಾಯತ ಸದಸ್ಯರನ್ನು ನಿನ್ನೆಯ ಸಭೆಯಲ್ಲಿ ಸೇರಿಸಲಾಗಿತ್ತು. ವಿಧಾನ ಪರಿಷತ್ ಚುನಾವಣೆಯ ಕಣದಲ್ಲಿ ಕಾಂಗ್ರೆಸ್, ಬಿಜೆಪಿ ಮಧ್ಯೆ ನೇರ ಹಣಾಹಣಿ ಹಿನ್ನೆಲೆಯಲ್ಲಿ ಬಿಜೆಪಿ ಪ್ರಚಾರವನ್ನು ಮತ್ತಷ್ಟು ತೀವ್ರಗೊಳಿಸಿದೆ. ಶಾಸಕ ಕೆ.ಶಿವನಗೌಡ ನಾಯಕ ಅವರು, ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿ, ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಉಸ್ತುವಾರಿ ಸಚಿವರು ಹಾಗೂ ಆ ಪಕ್ಷದ ಸಂಸದ, ಶಾಸಕರು, ಪಕ್ಷದ ಅಭ್ಯರ್ಥಿ ಪರ ತೀವ್ರ ಪ್ರಚಾರದಲ್ಲಿ ತೊಡಗಿದ್ದಾರೆ. ಕಳೆದ ಸಲ ಈ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಪ್ರತಿನಿಧಿಸಿತ್ತು. ಈ ಹಿನ್ನೆಲೆಯಲ್ಲಿ ಈ ಸಲ ಬಿಜೆಪಿ ಈ ಕ್ಷೇತ್ರವನ್ನು ಗೆಲ್ಲಲು ಶತ ಪ್ರಯತ್ನ ನಡೆಸಿದೆ. ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಪ್ರಚಾರವನ್ನು ಭರದಿಂದ ಹಮ್ಮಿಕೊಳ್ಳಲಾಗಿದೆ. ನಿನ್ನೆಯ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಶಿವನಗೌಡ ನಾಯಕ, ಕೊಪ್ಪಳದ ಬಿಜೆಪಿ ಶಾಸಕರು ಹಾಗೂ ಇನ್ನಿತರ ಮುಖಂಡರು ಪ್ರಚಾರದಲ್ಲಿ ತೊಡಗಿದ್ದರು.