ವಿಧಾನ ಪರಿಷತ್ ಚುನಾವಣೆ;ಬಿಜೆಪಿ ಹಿಂದುಳಿದಾಸ್ತ್ರ ತಂತ್ರ- ಆಂಜಿನೇಯ್ಯ ಟಿಕೇಟ್ ಪೈಪೋಟಿಗೆ ಹೆಚ್ಚಿದ ಬಲ

ಕಾಂಗ್ರೆಸ್ ಟಿಕೇಟ್: ಮುಂದುವರೆದವರ ಮಧ್ಯ ಪೋಟಿ-ಬಿಜೆಪಿ ಅಭ್ಯರ್ಥಿಗಾಗಿ ಬ್ಯಾಗವಾಟ್ ಸಂಘರ್ಷ
ರಾಯಚೂರು ನ ೯:-ಸ್ಥಳಿಯ ಸಂಸ್ಥೆಗಳಿಂದ ವಿಧಾನಸಭೆಗೆ ನಡೆಯುವ ಚುನಾವಣೆ ಘೋಷಣೆ ಪೂರ್ವದಲ್ಲಿಯೇ ಜಿಲ್ಲೆಯಲ್ಲಿ ರಾಜಕೀಯ ಆಂತರೀಕ ಪೈಪೋಟಿ ತೀವ್ರಗೊಂಡಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಟಿಕೇಟ್ ಆಕಾಂಕ್ಷಿಗಳ ಮಧ್ಯೆದ ಜಿದ್ದಾ ಜಿದ್ದಿ ಸಂಘರ್ಷ ಎರಡು ಪಕ್ಷಗಳ ಹೈ ಕಮಾಂಡ್ ಮೇಲೆ ಒತ್ತಡ ಹೆಚ್ಚುವಂತೆ ಮಾಡಿದೆ. ಆಡಳಿತ ರೂಢ ಬಿಜೆಪಿ ಪಕ್ಷದಲ್ಲಿ ಟಿಕೇಟ್ ಪೈಪೋಟಿ ಮುಂದುವರೆದ ಮತ್ತು ಹಿಂದುಳಿ ವರ್ಗದ ಸಂಘರ್ಷ ಸ್ವರೂಪ ಪಡೆದುಕೊಂಡಿದ್ದರೆ, ಕಾಂಗ್ರೆಸ್ ಪಕ್ಷದಲ್ಲಿ ಮುಂದುವರೆದವರ ಮಧ್ಯೆ ಟಿಕೇಟ್ ಹಗ್ಗ ಜಗ್ಗಾಟ ನಡೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ಲಿಂಗಸೂಗೂರಿನ ಶರಗೌಡ ಬಯ್ಯಾಪೂರ, ಶರಣಗೌಡ ಹಾಗೂ ಮಲ್ಲಿಕಾರ್ಜುನ ಯದ್ದಲದಿನ್ನಿ ಮಧ್ಯ ಪೈಪೋಟಿ ತೀವ್ರವಾಗಿದೆ. ವಿಧಾನ ಪರಿಷತ್ ಚುನಾವಣೆ ಟಿಕೇಟ್ ವಿಷಯಕ್ಕೆ ಸಂಬಂಧಿಸಿ ಕಾಂಗ್ರೆಸ್ ಜಿಲ್ಲಾ ಮುಖಂಡರು ಮೂರು ಭಾಗವಾಗಿ ವಿಭಜನೆಗೊಂಡಿದ್ದಾರೆ. ಒಂದು ಗುಂಪು ಶರಣಗೌಡ ಬಯ್ಯಾಪೂರ ಪರ ಇದ್ದರೆ ಮತ್ತೊಂದು ಗುಂಪು ಮಲ್ಲಿಕಾರ್ಜುನ ಯದ್ದಲದಿನ್ನಿ ಪರ ನಿಂತಿದೆ. ಮಗದೊಂದು ಗುಂಪು ಶರಣಗೌಡ ಪರ ಕೆಲಸ ಮಾಡುತ್ತಿದೆ. ಆದರೆ ಪ್ರಸ್ತುತ ಮಾಹಿತಿಯಂತೆ ಶರಣಗೌಡ ಬಯ್ಯಾಪೂರ ಅವರಿಗೆ ಟಿಕೇಟ್ ನೀಡುವ ಬಗ್ಗೆ ಹೆಚ್ಚಿನ ಒಲವು ವ್ಯಕ್ತಗೊಂಡಿದೆ ಎಂದು ಹೇಳಲಾಗುತ್ತಿದೆ.
ಆದರೆ, ಆಡಳಿತ ರೂಢ ಬಿಜೆಪಿ ಪಕ್ಷದಿಂದ ಯಾರು ಅಭ್ಯರ್ಥಿ ಎನ್ನುವುದು ಇನ್ನೂ ಅಂತಿಮಗೊಂಡಿಲ್ಲ. ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್ ಮತ್ತು ಈ. ಅಂಜಿನಯ್ಯ ಅವರು ಟಿಕೇಟ್ ಆಕಾಂಕ್ಷಿಗಳಾಗಿದ್ದಾರೆ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳನ್ನು ಒಳಗೊಂಡ ವಿಧಾನ ಪರಿಷತ್ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎನ್ನುವ ಬಗ್ಗೆ ನಿರ್ಧಾರ ಇನ್ನೂ ಅಂತಿಮಗೊಂಡಿಲ್ಲ. ಆರಂಭದಲ್ಲಿ ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್ ಅವರ ಹೆಸರು ಚಾಲ್ತಿಯಲ್ಲಿತ್ತು. ಆದರೆ ಬಿಜೆಪಿ ಹೈ ಕಮಾಂಡ್ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳನ್ನು ಒಳಗೊಂಡ ವಿಧಾನ ಸಭೆ ಕ್ಷೇತ್ರಕ್ಕೆ ಹಿಂದುಳಿದ ವರ್ಗದವರನ್ನು ಕಣಕ್ಕಿಳಿಸುವ ಬಗ್ಗೆ ಆಂತರೀಕವಾಗಿ ಚರ್ಚೆ ಆರಂಭಿಸುತ್ತಿದಂತೆ ರಾಜಕೀಯ ಲೆಕ್ಕಾಚಾರಗಳೇ ಬದಲಾಗಿವೆ.
ಬಿಜೆಪಿ ಪಕ್ಷದಲ್ಲಿ ಪ್ರಬಲ ಹಿಂದುಳಿದ ಸಮುದಾಯಕ್ಕೆ ಸೇರಿ ಅಭ್ಯರ್ಥಿಯ ಕೊರತೆ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಹೊಸ ಮುಖ ಮತ್ತು ಭಾರಿ ದುಭಾರಿ ಚುನಾವಣೆ ನಿರ್ವಹಿಸುವ ಸಾಮರ್ಥ್ಯ ನಾಯಕರ ಶೋಧ ಕಾರ್ಯದಲ್ಲಿ ಅಬಕಾರಿ ಗುತ್ತೇದಾರರಾದ ಈ. ಅಂಜಿನಯ್ಯ ಅವರ ಹೆಸರು ಹೈಕಮಾಂಡ್ ಗಮನಕ್ಕೆ ತರಲಾಯಿತು. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ವಯಕ್ತಿಕ ಮತ್ತು ರಾಜಕೀಯವಾಗಿ ಉತ್ತಮ ಸಂಬಂಧ ಹೊಂದಿರುವ ಹಾಗೂ ಆರ್ಥಿಕ ಪ್ರಾಬಲ್ಯದ ಹಿನ್ನೆಲೆಯಲ್ಲಿ ಆಂಜಿನಯ್ಯ ಅವರು ಟಿಕೇಟ್‌ಪಡೆಯಲು ಪ್ರಬಲ ಪೈಪೋಟಿ ನೀಡುವಂತೆ ಮಾಡಿದೆ. ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಹಿಂದುಳಿದ ವರ್ಗದ ಮತಗಳು ಅಪಾರ ಪ್ರಮಾಣದಲ್ಲಿರುವುದರಿಂದ ೨೦೨೩ ರ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿಟ್ಟು ವಿಧಾನ ಪರಿಷತ್ ಚುನಾವಣೆ ಟಿಕೇಟ್ ಹಿಂದುಳಿದ ವರ್ಗದವರಿಗೆ ನೀಡಲು ಗಂಭೀರ ಚಿಂತನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಹೈಕಮಾಂಡ್ ಈ ಯೋಚನೆಗೆ ಪೂರಕವಾಗಿ ಕೊಪ್ಪಳ ಮತ್ತು ರಾಯಚೂರು ಸಂಸದರು ಹಾಗೂ ಶಾಸಕರು ಹಿಂದುಳಿದ ಅಭ್ಯರ್ಥಿ ಶೋಧ ಕಾರ್ಯದಲ್ಲಿ ಆಂಜಿನಯ್ಯ ಅವರು ಚುನಾವಣೆಗೆ ಸಮರ್ಥ ಅಭ್ಯರ್ಥಿ ಎಂದು ನಿರ್ಧರಿಸಿ ನವೆಂಬರ್ ೩ ರಂದು ಆಂಜನಯ್ಯ ಅವರ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮವೂ ಪ್ರಕ್ರಿಯೆಯು ಪೂರ್ಣಗೊಳಿಸಲಾಯಿತು. ಆಂಜಿನಯ್ಯ ಅವರ ಸೇರ್ಪಡೆಯಿಂದ ವಿಧಾನ ಪರಿಷತ್ ಕಣಕ್ಕಿಳಿಸಲು ಪ್ರಬಲ ಹಿಂದುಳಿದ ವರ್ಗದ ನಾಯಕ ದೊರೆತಂತಾಗಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಹಿಂದುಳಿದ ವರ್ಗಕ್ಕೆ ಟಿಕೇಟ್ ನೀಡಬೇಕೆಂಬ ಒತ್ತಡ ತೀವ್ರಗೊಂಡಿದೆ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮುಂದುವರೆದ ಜನಪ್ರತಿನಿಧಿಗಳ ಪ್ರತಿನಿಧಿತ್ವದಲ್ಲಿ ಹಿಂದುಳಿ ವರ್ಗ ತನ್ನ ರಾಜಕೀಯ ಆಸ್ಥಿತ್ವವನ್ನೆ ಕಳೆದುಕೊಂಡು. ಹಿಂದುಗಳಿದ ವರ್ಗ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಳ್ಳುವಂತ ರಾಜಕೀಯ ವಾತಾವರಣ ನಿರ್ಮಾಣಗೊಂಡಿದೆ.
೧೯೮೫ ಪೂರ್ವದಲ್ಲಿ ಪ್ರಬಲ ಹಿಂದಿಳಿದ ವರ್ಗದ ನಾಯಕರ ಕೊರತೆಯಿಂದ ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಚುನಾವಣೆಗಳಲ್ಲಿ ಕೇವಲ ೧೦೦೦ ಮತ ಪಡೆದು ಠೇವಣಿ ಜಪ್ತಿಗೆ ಸೀಮಿತವಾಗಿತ್ತು. ಆದರೆ, ಹಿಂದುಳಿ ವರ್ಗದ ಎ. ಪಾಪಾರೆಡ್ಡಿ ಅವರು ಬಿಜೆಪಿ ಸೇರ್ಪಡೆ ನಂತರ ಜಿಲ್ಲೆಯಲ್ಲಿ ಬಿಜೆಪಿ ಚುನಾವಣಾ ವರ್ಚಸ್ಸು ಬದಲಾವಣೆಗೊಂಡು ಅಲ್ಲಿವರಿಗೆ ೧೦೦೦ ಮತಗಳ ಸಂಖ್ಯೆಗೆ ಸೀಮಿತವಾಗಿದ್ದ, ಪಕ್ಷ ೨೦ ಸಾವಿರ ಮತ ಪಡೆಯುವ ಮಟ್ಟಕ್ಕೆ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿತು. ೧೯೯೪ ರಲ್ಲಿ ನಗರ ವಿಧಾನ ಸಭೆ ಕ್ಷೇತ್ರದಲ್ಲಿ ಪಾಪಾರೆಡ್ಡಿ ಅವರ ಜಯಭೇರಿಯಿಂದ ಬಿಜೆಪಿ ಜಿಲ್ಲೆಯಲ್ಲಿ ಪ್ರಪ್ರಥಮ ಭಾರಿಗೆ ಜಯಭೇರಿ ಬಾರಿಸಿ ಖಾತೆ ತೆರೆದು ಇಂದು ಪ್ರಬಲ ಪಕ್ಷವಾಗಿ ಗುರುತಿಸಿಕೊಂಡಿದೆ. ಜಿಲ್ಲೆಯಲ್ಲಿ ಹಿಂದುಳಿದ ವರ್ಗದಕ್ಕೆ ನಾಯಕತ್ವ ನೀಡುವ ಉದ್ದೇಶದಿಂದ ಕಳೆದ ಒಂದು ವರ್ಷದ ಹಿಂದೆ ಬಿಜೆಪಿ ಕೇಂದ್ರ ಮುಂಖಂಡರು ಹಿಂದುಳಿದ ವರ್ಗದ ಅಶೋಕ ಗಸ್ತಿ ವರಿಗೆ ರಾಜ್ಯ ಸಭೆ ಸ್ಥಾನ ನೀಡಿತ್ತು. ಆದರೆ ಕೊರೊನಾ ಮಹಾಮಾರಿಗೆ ಗಸ್ತಿ ನಿಧನರಾದರು. ಈ ಹಿನ್ನೆಲೆಯಲ್ಲಿ ಹಿಂದುಳಿದ ವರ್ಗಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಪಕ್ಷದಲ್ಲಿ ಹಿಂದುಳಿದ ವರ್ಗದ ಮುಖಂಡರು ಮತ್ತು ಕಾರ್ಯಕರ್ತರ ಒತ್ತಡ ತೀವ್ರವಾಗಿದೆ.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಈ ಸಲ ಹಿಂದುಳಿದ ಮುಖಂಡರಿಗೆ ಅವಕಾಶ ನೀಡುವ ಮೂಲಕ ಹಿಂದುಳಿ ವರ್ಗದ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಬಿಜೆಪಿ ಪಕ್ಷ ಹಿಂದುಳಿ ವರ್ಗಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವ ಬದ್ಧತೆ ಪ್ರದರ್ಶಿಸಿ ಹಿಂದುಳಿದ ಮತಗಳ ಮೇಲೆ ಹಿತಡಿತ ಸಾಧಿಸಲು ಮುಂದಾಗುವುದೇ ಎಂದು ಕಾದು ನೋಡಬೇಕಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಂದುವರೆದ ಮುಖಂಡರಾದ ಬಸವರಾಜ ಪಾಟೀಲ್ ಇಟಗಿ ಅವರಿಗೆ ಟಿಕೇಟ್ ನೀಡಲಾಗಿತ್ತು. ಬಿಜೆಪಿ ಪಕ್ಷವು ಇದೇ ಸಮುದಾಯದ ಚಂದ್ರಶೇಖರ ಅವರಿಗೆ ಟಿಕೇಟ್ ನೀಡಿತ್ತು. ಕಾಂಗ್ರೆಸ್ ಸ್ಪರ್ಧೆಯ ಮುಂದೆ ಬಿಜೆಪಿ ಪರಾಭಾವಗೊಂಡಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಂದುವರೆದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಖಚಿತವಾಗಿದೆ. ಬಿಜೆಪಿ ಪಕ್ಷ ಈ ಸಲ ಹಿಂದುಳಿದ ವರ್ಗದ ಸಭ್ಯರ್ಥಿಯಾಸ್ತ್ರ ಬಳಸುವ ಸುಳಿವು ದೊರೆತಿದೆ. ಈ. ಆಂಜಿನಯ್ಯ ಅವರನ್ನು ಕಣಕ್ಕಿಳಿಸಲು ಗಂಭೀರ ಪರಿಶೀಲನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ ಬ್ಯಾಗವಾಟ್ ಬಸವನಗೌಡ ಅವರ ಟಿಕೇಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಬ್ಯಾಗವಾಟ್ ಮತ್ತು ಆಂಜಿನಯ್ಯ ಅವರ ಮಧ್ಯದ ಪೈಪೋಟಿಯಲ್ಲಿ ಈ ಸಲ ಬಿಜೆಪಿ ಹೈಕಮಾಂಡ್ ಹಿಂದುಳಿದ ವರ್ಗಕ್ಕೆ ಮಣೆ ಹಾಕುವುದೆ ಅಥವಾ ಎಂದಿನಂತೆ ಮುಂದುವರೆದ ವರ್ಗಕ್ಕೆ ಮಣೆ ಹಾಕುವರೆ ಎಂದು ಪಕ್ಷದಲ್ಲಿ ಕುತುಹಲ ತೀವ್ರವಾಗಿದೆ.