ವಿಧಾನ ಪರಿಷತ್ ಚುನಾವಣೆಃ ಮತದಾನ ದಿನದಂದು ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಟ್ಟುಕೊಳ್ಳಲು ಸೂಚನೆ

ವಿಜಯಪುರ, ಡಿ.9-ವಿಧಾನ ಪರಿಷತ್ 03-ಬಿಜಾಪುರ-ಬಾಗಲಕೋಟ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತದಾನ ದಿನದಂದು ಚುನಾವಣೆಗೆ ನೇಮಿಸಿದ ಎಲ್ಲ ಅಧಿಕಾರಿಗಳು ಮತಗಟ್ಟೆಗಳಲ್ಲಿ ಎಲ್ಲ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಪಿ.ಸುನೀಲಕುಮಾರ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ವಿಡಿಯೋ ಸಂವಾದ ಸಭಾಂಗಣದಲ್ಲಿ ವಿಧಾನ ಪರಿಷತ್ 03-ಬಿಜಾಪುರ-ಬಾಗಲಕೋಟ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ವಿಜಯಪುರ – ಬಾಗಲಕೋಟ ಎರಡು ಜಿಲ್ಲೆಗಳ ಅಧಿಕಾರಿಗಳೊಂದಿಗೆ ದಿ.7-12-2021 ರಂದು ಸಂವಾದ ನಡೆಸಿ ಮಾತನಾಡಿದ ಅವರು ಮತಗಟ್ಟೆಗಳಲ್ಲಿ ನಂಬರಿಂಗ್, ಸ್ಟೀಕ್‍ರಿಂಗ್, ವಿದ್ಯುತ್, ವಾಹನ ವ್ಯವಸ್ಥೆ ಸೇರಿದಂತೆ ಇನ್ನಿತರ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕೆಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ವಿಡಿಯೋಗ್ರಾಫಿ ಕಾರ್ಯವನ್ನು ಸುವ್ಯವಸ್ಥಿತವಾಗಿ ಕೈಗೊಂಡು ಪವರ್ ಬ್ಯಾಕ್ ಅಪ್, ಬ್ಯಾಟರಿ ಬ್ಯಾಕ್ ಅಪ್‍ಗಳನ್ನು ಕೂಡ ಇಟ್ಟುಕೊಳ್ಳುವಂತೆ ಅವರು ಸೂಚನೆ ನೀಡಿದರು.
ಚುನಾವಣೆ ಸಿಬ್ಬಂದಿಗಳಿಗೆ ಆಹಾರದ ವ್ಯವಸ್ಥೆ ಸಮರ್ಪಕವಾಗಿ ಇರುವಂತೆ ನೋಡಿಕೊಳ್ಳಲು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಡಿ ಮಸ್ಟರಿಂಗ್ ಕಾರ್ಯವನ್ನು ಕೂಡ ಅತ್ಯಂತ ಸಮರ್ಪಕವಾಗಿ ನಿರ್ವಹಿಸಿ, ಬ್ಯಾಲೆಟ್ ಪೇಪರ್‍ಗಳ ಸಮರ್ಪಕ ನಿರ್ವಹಣೆ ಮಾಡುವುದರ ಜೊತೆಗೆ ಚುನಾವಣಾ ಕಾರ್ಯದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮವಹಿಸಿ, ಚುನಾವಣೆ ನಿಯಮಗಳನ್ನು ಎಲ್ಲರೂ ತಪ್ಪದೇ ಪಾಲಿಸಲು ಕ್ರಮವಹಿಸುವಂತೆ ಅವರು ಸೂಚನೆ ನೀಡಿದರು.
ಚುನಾವಣಾ ಕಾರ್ಯದಲ್ಲಿ ಯಾವುದೇ ಲೋಪದೋಷಗಳು ಆಗದಂತೆ ಎಚ್ಚರಿಕೆ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಬಾಗಲಕೋಟ ಜಿಲ್ಲೆಯ ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಬಾಗಲಕೋಟ ಜಿಲ್ಲೆಯ ವಿವಿಧ ಚುನಾವಣಾ ಅಧಿಕಾರಿಗಳು ಸೇರಿದಂತೆ ವಿಜಯಪುರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ರಮೇಶ್ ಕಳಸದ, ಉಪವಿಭಾಗಾಧಿಕಾರಿಗಳಾದ ಬಲರಾಮ ಲಮಾಣಿ ಸೇರಿದಂತೆ ಜಿಲ್ಲೆಯ ವಿವಿಧ ಚುನಾವಣಾ ಅಧಿಕಾರಿಗಳು ಉಪಸ್ಥಿತರಿದ್ದರು.