ವಿಧಾನ ಪರಿಷತ್‍ನ ಈಶಾನ್ಯ ಶಿಕ್ಷಕರ ಚುನಾವಣೆಯ ಮತಗಳ ಎಣಿಕೆಗೆ ಸಕಲ ಸಿದ್ಧತೆ ಗುಲ್ಬರ್ಗಾ ವಿವಿ ಗಣಿತಶಾಸ್ತ್ರ ವಿಭಾಗದಲ್ಲಿ ನಾಳೆ ಬೆಳಿಗ್ಗೆ 8ಕ್ಕೆ ಕೌಂಟಿಂಗ್ ಆರಂಭ

ಕಲಬುರಗಿ, ನ.09:ಕರ್ನಾಟಕ ರಾಜ್ಯ ವಿಧಾನ ಪರಿಷತ್‍ನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತಗಳ ಎಣಿಕೆ ನಾಳೆ (ಮಂಗಳವಾರ) ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಡಾ. ಎನ್.ವಿ. ಪ್ರಸಾದ್ ಅವರು ತಿಳಿಸಿದ್ದಾರೆ.
ಸೋಮವಾರ ಮತ ಎಣಿಕಾ ಕೇಂದ್ರಕ್ಕೆ ತೆರಳಿ ಸಿದ್ಧತೆಗಳ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದ ಅವರು, 5 ಅಭ್ಯರ್ಥಿಗಳು ಕಣದಲ್ಲಿದ್ದು, ಒಟ್ಟು 21,437 ಮತಗಳು ಚಲಾವಣೆಯಾಗಿವೆ. ಮಂಗಳವಾರ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಕೌಂಟಿಂಗ್‍ಗಾಗಿ 7 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ ಎಂದರು.
ಮತ ಎಣಿಕೆ ಮಾಡುವ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಪ್ರತಿ ಟೇಬಲ್‍ಗೆ ಒಬ್ಬ ಕೌಂಟಿಂಗ್ ಸೂಪರ್ ವೈಸರ್, ಮೂವರು ಕೌಂಟಿಂಗ್ ಅಸಿಸ್ಟೆಂಟ್ ಹಾಗೂ ಓರ್ವ ಡಿ ಗ್ರೂಪ್ ನೌಕರರನ್ನು ನೇಮಿಸಲಾಗಿದೆ. ಟ್ಯಾಬುಲೇಷನ್‍ಗೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಒಟ್ಟಾರೆ 120 ಸಿಬ್ಬಂದಿಯನ್ನು ಮತ ಎಣಿಕೆಗಾಗಿ ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಕಲಬುರಗಿ ನಗರ ಪೊಲೀಸ್ ಆಯುಕ್ತರೊಂದಿಗೆ ಭದ್ರತೆ ಕುರಿತು ಚರ್ಚಿಸಲಾಗಿದ್ದು, ಡಿಸಿಪಿ, ಎಸಿಪಿ ಸೇರಿದಂತೆ ಸುಮಾರು 100 ಮಂದಿ ಪೊಲೀಸರನ್ನು ಈ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಹೇಳಿದರು.
ಕೋವಿಡ್-19 ಹಿನ್ನೆಲೆಯಲ್ಲಿ ಮತ ಎಣಿಕಾ ಕೇಂದ್ರದಲ್ಲಿ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಪರ ಪ್ರಾದೇಶಿಕ ಆಯುಕ್ತ ಇಲಿಯಾಸ್ ಅಹಮ್ಮದ್ ಇಸಾಮದಿ ಇದ್ದರು.