ವಿಧಾನ ಪರಿಷತ್‍ನಲ್ಲಿ ಇನ್ನೊಬ್ಬರ ಕಾಲು ಹಿಡಿದು ವಿಧೇಯಕ ಅಂಗೀಕರಿಸಿಕೊಳ್ಳಬೇಕಾದ ಅನಿವಾರ್ಯತೆ ಅಂತ್ಯವಾಗಲಿದೆಃ ಬಿ.ಎಸ್. ಯಡಿಯೂರಪ್ಪ

ವಿಜಯಪುರ, ನ.21-ವಿಧಾನ ಪರಿಷತ್‍ನಲ್ಲಿ ಇನ್ನೊಬ್ಬರ ಕಾಲು ಹಿಡಿದು ವಿಧೇಯಕ ಅಂಗೀಕರಿಸಿಕೊಳ್ಳಬೇಕಾದ ಅನಿವಾರ್ಯತೆ ಅಂತ್ಯವಾಗಲಿದ್ದು, ಮೇಲ್ಮನೆಯಲ್ಲಿಯೂ ಬಿಜೆಪಿ ಬಹುಮತ ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭವಿಷ್ಯ ನುಡಿದರು.
ವಿಜಯಪುರ ದರಬಾರ ಹೈಸ್ಕೂಲ್ ಆವರಣದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಜನ ಸ್ವರಾಜ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮೇಲ್ಮನೆಯಲ್ಲಿ ಬಹುಮತ ಇಲ್ಲದ ಕಾರಣದಿಂದಾಗಿ ಇನ್ನೊಬ್ಬರ ಕಾಲು ಹಿಡಿದು ವಿಧೇಯಕಗಳನ್ನು ಅಂಗೀಕಾರ ಪಡೆಯಬೇಕಾದ ಅನಿವಾರ್ಯತೆ ಇದೆ, ಈ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಜಯ ಸಾಧಿಸುವ ಮೂಲಕ ಮೇಲ್ಮನೆಯಲ್ಲಿಯೂ ಬಹುಮತ ಪಡೆದುಕೊಳ್ಳುವುದು ಶತಸಿದ್ದ ಎಂದು ಭವಿಷ್ಯ ನುಡಿದರು.
ಒಂದು ಗ್ರಾಮ ಪಂಚಾಯತಿ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಲು ಹಿಂದೇಟು ಹಾಕುವ ಕಾಲದಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದೆ, ಆದರೆ ನಾನು ಮನೆಯಲ್ಲಿ ಕುಳಿತಿಲ್ಲ, ಜಿಲ್ಲೆ ಜಿಲ್ಲೆ, ಹಳ್ಳಿ ಹಳ್ಳಿಗಳನ್ನು ಸಂಚರಿಸಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 140 ಕ್ಕೂ ಸ್ಥಾನಗಳನ್ನು ಗೆಲ್ಲಿಸುವ ಮೂಲಕ ಮತ್ತೆ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರುವ ದಿವ್ಯ ಶಪಥ ಮಾಡಿದ್ದೇನೆ ಎಂದರು.
ಗ್ರಾಮ ಪಂಚಾಯತ ಸದಸ್ಯ ಸ್ಥಾನ ಸಣ್ಣದಲ್ಲ, ಪುರಸಭೆ ಸದಸ್ಯನಾದ ನಾನು ಜನಾಶೀರ್ವಾದದಿಂದ ಹಂತ ಹಂತವಾಗಿ ಮೇಲೆ ಬಂದು ಮುಖ್ಯಮಂತ್ರಿ ಗಾದಿ ಅಲಂಕರಿಸುವಂತಾಯಿತು, ಹೀಗಾಗಿ ನೀವು ಒಳ್ಳೆಯದಾಗಿ ಜನಸೇವೆ ಮಾಡುತ್ತಾ ಹೋದರೆ ದೊಡ್ಡ ಸ್ಥಾನ ಅಲಂಕರಿಸುವುದು ನಿಶ್ಚಿತ ಎಂದು ಹುರಿದುಂಬಿಸಿದರು.
ಇದು ಕೇವಲ ಚುನಾವಣೆ ಉದ್ದೇಶದಿಂದ ಆಯೋಜಿಸಿದ ಸಮಾವೇಶವಲ್ಲ, ಅತಿವೃಷ್ಟಿಯಿಂದ ರೈತರಿಗೆ ತೊಂದರೆಯಾಗಿದೆ, ಶೇ.70 ರಷ್ಟು ರೈತರಿಗೆ ತೊಂದರೆಯಾಗಿದೆ. ಕೇಂದ್ರ ತಂಡ ಸಹ ಭೇಟಿ ನೀಡಬೇಕಿದೆ, ಈ ಬಗ್ಗೆ ಮುಖ್ಯಮಂತ್ರಿ ಅವರು ಸಹ ವಿಶೇಷ ಗಮನ ಹರಿಸುವುದಾಗಿ ಈಗಾಗಲೇ ಹೇಳಿದ್ದಾರೆ, ಅನ್ನ ನೀಡುವ ಅನ್ನದಾತನ ಸ್ವಾಭಿಮಾನ, ಗೌರವದ ಬದುಕು ನಮಗೆ ಮುಖ್ಯ ಎಂದರು.
ಒಡನಾಟ ಸ್ಮರಿಸಿಕೊಂಡ ಬಿಎಸ್‍ವೈಃ ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್‍ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿರುವ ಪಿ.ಎಚ್. ಪೂಜಾರ ಅವರೊಂದಿಗೆ ಒಡನಾಟ ಹಾಗೂ ವಿಜಯಪುರ ಜಿಲ್ಲೆಯ ಬಾಂಧವ್ಯದ ಬಗ್ಗೆಯೂ ಯಡಿಯೂರಪ್ಪ ತಮ್ಮ ಅನುಭವ ಹಂಚಿಕೊಂಡರು.
ನಾನು ಪಿ.ಎಚ್. ಪೂಜಾರ ಹಲವಾರು ಬಾರಿ ವಿಜಯಪುರದಲ್ಲಿ ಪ್ರಚಾರ ನಡೆಸಿದ್ದೇವೆ. ಸಭೆ ನಡೆಸಿದ್ದೇವೆ, ಹಳ್ಳಿ-ಹಳ್ಳಿ ಸುತ್ತಿ ಸಮಾವೇಶ ಮಾಡಿದಾಗ 40 ಜನ ಸಹ ಸೇರುತ್ತಿರಲಿಲ್ಲ, ವಾಪಾಸ್ಸು ಸರ್ಕಾರಿ ಬಸ್‍ನಲ್ಲಿ ಹೋದ ಉದಾಹರಣೆಗಳಿವೆ ಎಂದು ತಮ್ಮ ಅನುಭವದ ಬುತ್ತಿ ಬಿಚ್ಚಿದರು.
ಗ್ರಾಮ ಪಂಚಾಯತ ಸದಸ್ಯರ ಗೌರವಧನ ಹೆಚ್ಚಳ ಸೇರಿದಂತೆ ಹಲವಾರು ಕಾರ್ಯಗಳನ್ನು ಕೈಗೊಂಡಿರುವ ಬಗ್ಗೆ ನಿಮಗೆ ಗೊತ್ತಿದೆ, ಈ ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳಬೇಡಿ, ಇಲ್ಲಿ ನಾನೇ ಅಭ್ಯರ್ಥಿ ಎಂದು ತಿಳಿದುಕೊಳ್ಳಿ ಎಂದು ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮಾಜಿ ಸಚಿವ ಬಿ.ಶ್ರೀರಾಮಲು ಮಾತನಾಡಿ ಪ್ರಧಾನಿ ಮೋದಿ ಆಲ್ ಟೈಂ ಲೀಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರು ಪಕ್ಷಕ್ಕೆ ಆನೆಬಲ ಇದ್ದಂತೆ. ಈ ಎಲ್ಲ ಮಹನೀಯರ ಆರ್ಶೀರ್ವಾದದಿಂದ ಬಿಜೆಪಿ ಬೆಳೆಯುತ್ತಿದೆ. ಒಂದೇ ಕ್ಷೇತ್ರದಲ್ಲಿ ಗೆದ್ದಿದ್ದಕ್ಕೆ ಕಾಂಗ್ರೆಸ್ ನಾಯಕರು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ನೆಲಕ್ಕೆ ಬಿದ್ದರೂ ಜಟ್ಟಿ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಮಾತನಾಡುತ್ತಿದ್ದಾರೆ, ಕಾಂಗ್ರೆಸ್ ಮೂರು ಭಾಗವಾಗಿದೆ, ಡಿ.ಕೆ. ಶಿವಕುಮಾರ ಒಂದು ಕಡೆ, ಸಿದ್ಧರಾಮಯ್ಯ ಒಂದು ಕಡೆ ಹೀಗೆ ಕಾಂಗ್ರೆಸ್ ಖಾಲಿ ಕೈಯಾಗಿದೆ ಎಂದು ವ್ಯಂಗ್ಯವಾಡಿದರು.
ಸಚಿವರಾದ ಗೋವಿಂದ ಕಾರಜೋಳ, ಬಿ. ಶ್ರೀರಾಮಲು, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎ.ಎಸ್. ಪಾಟೀಲ್ ನಡಹಳ್ಳಿ, ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ, ಅರುಣ ಶಹಾಪೂರ, ಹಣಮಂತ ನಿರಾಣಿ, ಅಭ್ಯರ್ಥಿ ಪಿ.ಎಚ್. ಪೂಜಾರ, ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ಕರ್ನಾಟಕ ಸಾವಯವ ಬೀಜ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ, ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಡಾ.ಸುರೇಶ ಬಿರಾದಾರ ಪಾಲ್ಗೊಂಡಿದ್ದರು.
ಸಚಿವೆ ಜೊಲ್ಲೆ, ಶಾಸಕ ಯತ್ನಾಳ ಗೈರುಃ ಜನಸ್ವರಾಜ್ ಸಮಾವೇಶದಲ್ಲಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಗೈರಾಗಿದ್ದರು.