ವಿಧಾನ ಪರಿಷತ್‍ಗೆ ಸ್ಪರ್ಧಿಸಲಾರೆ: ವಿಧಾನಸಭೆಗೆ ಸ್ಪರ್ಧಿಸುವೆ: ವಿಜಯ್ ಸಿಂಗ್

ಬೀದರ:ನ.12: ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಚುನಾವಣೆಗೆ ತಾವು ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಈ ಕ್ಷೇತ್ರದ ಹಾಲಿ ಸದಸ್ಯ ಕಾಂಗ್ರೆಸ್‍ನ ವಿಜಯಸಿಂಗ್ ಹೇಳಿದರು.

ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸಂಜಯ ಖೇಣಿ ಅವರನ್ನು ಪರಾಭವಗೊಳಿಸಿ, ಮೊದಲ ಬಾರಿಗೆ ಪರಿಷತ್‍ಗೆ ಆಯ್ಕೆಯಾಗಿದ್ದರು.’ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಬೀದರ್ ಜಿಲ್ಲೆಯ ರಾಜಕೀಯದಲ್ಲಿಯೇ ಮುಂದುವರೆಯುತ್ತಿದ್ದು, ಇಲ್ಲಿಯ ಒಂದು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸುವ ಬಯಕೆ ಹೊಂದಿದ್ದೇನೆ. ಯಾವ ಕ್ಷೇತ್ರ ಎನ್ನುವುದನ್ನು ನಂತರ ತಿಳಿಸುವೆ’ ಎಂದು ವಿಜಯಸಿಂಗ್ ಪ್ರತಿಕ್ರಿಯಿಸಿದರು.

‘ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ವಿಧಾನಸಭಾ ಸದಸ್ಯರಿಗೆ ಹೆಚ್ಚಿನ ಅವಕಾಶಗಳು ಇವೆ. ಇದರಿಂದ ಒಂದು ವಿಧಾನಸಭಾ ಕ್ಷೇತ್ರಕ್ಕೆ ಸೀಮಿತವಾಗಿ ಇದ್ದುಕೊಂಡು ಹೆಚ್ಚಿನ ಕೆಲಸಗಳನ್ನು ಮಾಡಲು ಸಾಧ್ಯವಿದೆ’ ಎಂದರು.