ವಿಧಾನಸೌಧಕ್ಕೆ ನೂತನಭದ್ರತಾ ವ್ಯವಸ್ಥೆ

ಬೆಂಗಳೂರು,ಮಾ.೭-ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧಕ್ಕೆ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಬಿಗಿ ಭದ್ರತೆಯನ್ನು ಒದಗಿಸಲು ಮಯಂದಾಗಿರುವ ಪೊಲೀಸ್ ಇಲಾಖೆಯು ಈ ಸಂಬಂಧ ಗೃಹ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಭದ್ರತಾ ಯೋಜನೆ ಶೀಘ್ರ ಒಪ್ಪಿಗೆಯೂ ಸಿಗಲಿದ್ದು ಸಂಸತ್ ಮಾದರಿಯ ಬಧ್ರತಾ ವ್ಯವಸ್ಥೆಯನ್ನು ಒದಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಹೀಗಾಗಿ ವಿಧಾನಸೌಧ ಪ್ರವೇಶಕ್ಕೆ ಮುನ್ನ ಫೇಸ್ ರೀಡಿಂಗ್ (ಮುಖಚಹರೆ) ಮಾಡಲಾಗುತ್ತದೆ. ವಿಧಾನಸೌಧಕ್ಕೆ ಸಂಸತ್ ಮಾದರಿಯ ಬಧ್ರತಾ ವ್ಯವಸ್ಥೆಯನ್ನು ಒದಗಿಸಲು ೪೩ ಕೋಟಿ ರೂ ವೆಚ್ಚವಾಗಲಿದೆ.
ಗೃಹ ಇಲಾಖೆಯಿಂದ ಈ ಸಂಬಂಧ ಸಲ್ಲಿಕೆಯಾಗಿರುವ ಪ್ರಸ್ತಾಪಕ್ಕೆ ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಲಿದ್ದು ಇದರಿಂದ ದೆಹಲಿಯ ನೂತನ ಸಂಸತ್ ಭವನದ ಮಾದರಿಯಲ್ಲಿ ವಿಧಾನಸೌಧಕ್ಕೂ ಭದ್ರತೆ ದೊರೆಯಲಿದೆ. ಹೊಸ ಭದ್ರತಾ ವ್ಯವಸ್ಥೆಯು ಶಾಸಕರು, ಸಚಿವರು, ಅಧಿಕಾರಿಗಳು, ಪತ್ರಕರ್ತರಿಗೂ ಅನ್ವಯವಾಗಲಿದೆ. ಹೀಗಾಗಿ ವಿಧಾನಸೌಧದ ಎಲ್ಲ ಗೇಟ್‌ಗಳಲ್ಲಿ ಫೇಸ್ ರೀಡಿಂಗ್ ಅನ್ನು ಕಡ್ಡಾಯ ಮಾಡಲಾಗಿದೆ.
ಹೊಸ ಭದ್ರತೆ ಹೇಗಿರಲಿದೆ?
ವಿಧಾನಸೌಧದ ಆವರಣದಲ್ಲಿ ಇರುವ ೧೮ ಸಿಸಿ ಕ್ಯಾಮೆರಾಗಳನ್ನು ೨೫೬ಕ್ಕೆ ಹೆಚ್ಚಿಸಿ, ಗೇಟ್ ಪ್ರವೇಶಿಸುವ ವಾಹನಗಳಿಗೆ ನೋಂದಾಯಿತ ಪಾಸ್ ಅನ್ನು ಅಳವಡಿಕೆ ಮಾಡಲಾಗುವುದು. ಎಲ್ಲ ಪ್ರವೇಶ ದ್ವಾರದಲ್ಲಿ ಎಲೆಕ್ಟ್ರಿಕ್ ಬ್ಯಾರಿಕೆಡ್ ಅನ್ನು ಅಳವಡಿಕೆ ಮಾಡಲಾಗುವುದು.
ಫೇಸ್ ರೀಡಿಂಗ್ ಸಿಸ್ಟಂ:
ವಿಧಾನಸೌಧದ ಪ್ರತಿ ಗೇಟ್‌ನಲ್ಲಿಯೂ ಫೇಸ್ ರೀಡಿಂಗ್ ಸಿಸ್ಟಂ ಅನ್ನು ಅಳವಡಿಕೆ ಮಾಡಲಾಗುತ್ತದೆ. ಯಾವುದೇ ವ್ಯಕ್ತಿ ಒಳಗೆ ಬರುವ ಮುನ್ನ ಅಳವಡಿಕೆ ಮಾಡಲಾಗಿರುವ ಕ್ಯಾಮೆರಾವು ಅವರ ಫೇಸ್ ರೀಡ್ ಮಾಡಲಿದೆ. ಆ ವ್ಯಕ್ತಿಯು ಒಳಪ್ರವೇಶಿಸಿದ ಬಳಿಕ ಸಂಪೂರ್ಣ ಚಲನವಲನದ ಮೇಲೆ ನಿಗಾ ಇಡಲಾಗುತ್ತದೆ. ಒಳಪ್ರವೇಶ ಮತ್ತು ನಿರ್ಗಮನದವರೆಗಿನ ಮಾಹಿತಿಯು ಕಂಟ್ರೋಲ್ ರೂಮ್‌ಗೆ ಹೋಗಲಿದೆ. ಇನ್ನು ಬೂಮ್ ಬ್ಯಾರಿಯರ್ ತಳ್ಳಿ ಒಳನುಗ್ಗುವ ವಾಹನಗಳ ಟೈರ್ ಪಂಚರ್‌ಗೆ ಸಹ ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗುತ್ತದೆ.
ಅಧಿಕೃತ ಐಡಿ ಕಾರ್ಡ್:
ಶಾಸಕರು, ಸಚಿವರು, ಅಧಿಕಾರಿಗಳು, ಸಿಬ್ಬಂದಿಗಳು, ಪತ್ರಕರ್ತರು ಸಹ ತಪಾಸಣಾ ವ್ಯಾಪ್ತಿಗೆ ಬರಲಿದ್ದಾರೆ. ಅಧಿಕೃತ ಸಿಬ್ಬಂದಿಯ ಐಡಿ ಕಾರ್ಡ್ ಸ್ಕ್ಯಾನ್ ಮಾಡಿಸಿಯೇ ವಿಧಾನಸೌಧಕ್ಕೆ ಪ್ರವೇಶ ನೀಡಲಾಗುವುದು. ಪತ್ರಕರ್ತರ ಅಧಿಕೃತ ಐಡಿ ಕಾರ್ಡ್‌ಗಳಿಗೆ ಮಾತ್ರವೇ ಗೇಟ್‌ಗಳಲ್ಲಿ ಮಾನ್ಯತೆ ಸಿಗುತ್ತದೆ. ಶಾಸಕರ ಜತೆಗೆ ಗುಂಪಾಗಿ ಬರುವ ಸಾರ್ವಜನಿಕರ ಸಂಪೂರ್ಣ ವಿವರವನ್ನು ಪಡೆದು ಪ್ರವೇಶಕ್ಕೆ ಅವಕಾಶ ನೀಡಲಾಗುವುದು.
ಅಪಾಯಕಾರಿ ವಸ್ತುಗಳು, ಎಲೆಕ್ಟ್ರಿಕ್ ಹಾರ, ಸಿಡಿಮದ್ದುಗಳಿಗೆ ನಿಷೇಧ ಹೇರಲಾಗಿದೆ. ಸಭೆ ಸಮಾರಂಭಗಳಿಗಾಗಿ ಆಗಮಿಸುವವರ ಮೇಲೆ ಹೆಚ್ಚಿನ ನಿಗಾ ವಹಿಸಲು ಸೂಚನೆ ನೀಡಲಾಗಿದೆ.