ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ಚುನಾವಾಣಾ ಕರ್ತವ್ಯ ಲೋಪ: ಎಪಿಎಂಸಿ ಬೆರಳಚ್ಚುಗಾರ ಅಮಾನತು


ಬಳ್ಳಾರಿ,ಏ.28: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದಂತೆ, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅನಂತಪುರ ಬೈಪಾಸ್ ರಸ್ತೆ ವೃತ್ತದಲ್ಲಿ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್‍ನಲ್ಲಿ ಎಸ್‍ಎಸ್‍ಟಿ ತಂಡಕ್ಕೆ ನಿಯೋಜನೆಗೊಂಡಿದ್ದ ಎಪಿಎಂಸಿಯ ಬೆರಳಚ್ಚುಗಾರ ಎಸ್.ವಿಶ್ವನಾಥ ಗೌಡ ಅವರು ಕರ್ತವ್ಯ ನಿರ್ವಹಿಸದೇ ನಿರ್ಲಕ್ಷ್ಯ ತೋರಿದ ಕಾರಣಕ್ಕೆ ಅವರನ್ನು ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಅವರು ಆದೇಶ ಮಾಡಿದ್ದಾರೆ.
ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023 ಸಂಬಂಧಿಸಿದಂತೆ, ಈಗಾಗಲೇ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಮಾದರಿ ನೀತಿ ಸಂಹಿತೆಯನ್ನು ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸುವುದು ಅವಶ್ಯವಿರುವುದರಿಂದ  ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯದಿಂದ ವಿವಿಧ ಮಾದರಿ ನೀತಿ ಸಂಹಿತೆ ತಂಡಗಳನ್ನು ರಚಿಸಿಲಾಗಿದೆ.
ಎಸ್‍ಎಸ್‍ಟಿ ತಂಡಕ್ಕೆ ನಿಯೋಜಿತಗೊಂಡಿದ್ದ ಎಪಿಎಂಸಿ ಬೆರಳಚ್ಚುಗಾರ ಎಸ್.ವಿಶ್ವನಾಥ.ಎಸ್ ಅವರು ಚುನಾವಣಾ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ಅನಧಿಕೃತವಾಗಿ ಗೈರು ಹಾಜರಾಗುವುದು ಮತ್ತು ಪ್ರತಿದಿನ ಚುನಾವಣೆ ಶಾಖೆಗೆ ವರದಿ ನೀಡದೇ ಇರುವುದು ಕಂಡುಬಂದಿರುತ್ತದೆ.
ನೌಕರರಿಗೆ ಚುನಾವಣೆ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುವಂತೆ ವೀಡಿಯೋ ಸಂವಾದದ ಮೂಲಕ ಹಾಗೂ ಸಭೆಗಳ ಮೂಲಕ ಕಟ್ಟು ನಿಟ್ಟಿನ ನಿರ್ದೇಶನ ನೀಡಲಾಗಿತ್ತು. ಆದರೆ ವಿಶ್ವನಾಥ ಗೌಡ.ಎಸ್ ಅವರು ತಮಗೆ ವಹಿಸಿದ ಕೆಲಸವನ್ನು ಸರಿಯಾಗಿ ನಿರ್ವಹಿಸುವಲ್ಲಿ ಬೇಜವಾಬ್ದಾರಿಯನ್ನು ತೋರಿಸಿರುತ್ತಾರೆ.
ಆದ್ದರಿಂದ ಪ್ರಜಾ ಪ್ರಾತಿನಿಧ್ಯ ಕಾಯ್ದೆ, 1951 ನಿಯಮದಡಿ ಹಾಗೂ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ರ  ನಿಯಮ 10(1) ರಂತೆ ಪ್ರದತ್ತವಾದ ಅಧಿಕಾರ  ಚಲಾಯಿಸಿ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿಗಳು ಆದೇಶಿಸಿದ್ದಾರೆ.
ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮ 1958ರ ನಿಯಮ 98 ರನ್ವಯ ಜೀವನಾಂಶ ಭತ್ಯೆ ಪಡೆಯಲು ಅರ್ಹರಿರುತ್ತಾರೆ ಹಾಗೂ ಅಮಾನತ್ತಿನ ಅವಧಿಯಲ್ಲಿ ನೌಕರರು ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಕೇಂದ್ರಸ್ಥಾನ ಬಿಡುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.