ವಿಧಾನಸಭೆ ಮಾದರಿಯಲ್ಲಿ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವು ಖಚಿತ; ಸಚಿವ ನಾಗೇಂದ್ರ ವಿಶ್ವಾಸ


ಸಂಜೆವಾಣಿ ವಾರ್ತೆ
ಬಳ್ಳಾರಿ, ಅ.20: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಐದಕ್ಕೆ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸಿದಂತೆ 2024ರ ಲೋಕಸಭೆ ಚುನಾವಣೆಯಲ್ಲೂ ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಗೆದ್ದು ಕೊಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ವಾಗ್ದಾನ ಮಾಡಿದರು.
ನಗರ ಹೊರವಲಯದ ಖಾಸಗಿ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಗುರುವಾರ ಹಮ್ಮಿಕೊಂಡಿದ್ದ ಎಸ್‍ಸಿ, ಎಸ್‍ಟಿ ಲೀಡರ್‍ಶಿಪ್ ಡೆವಲಪ್ಮೆಂಟ್ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಅದಿನಾಯಕಿ ಸೋನಿಯಾಗಾಂಧಿಯವರ ಅಶಯದಂತೆ ಬಳ್ಳಾರಿಯಲ್ಲಿ ಎಸ್.ಸಿ, ಎಸ್.ಟಿ, ಒ.ಬಿ.ಸಿ, ಮೈನಾರಿಟಿ ಘಟಕಗಳಿಗೆ ಲೀಡರ್ ಶಿಫ್ ಡೆವಲಪ್‍ಮೆಂಟ್  ಕಾರ್ಯಾಗಾರವನ್ನ ಆಯೋಜಿಸಿರುವುದು ನಾಯಕತ್ವವನ್ನ ಬೆಳಸಿಕೊಳ್ಳಲು ಸಹಕಾರಿಯಾಗಲಿದೆ. ರಾಜ್ಯದ ಐದು ಎಸ್‍ಸಿ, ಎರಡು ಎಸ್‍ಟಿ ಸೇರಿ ಒಟ್ಟು ಏಳು ಮೀಸಲು ಕ್ಷೇತ್ರಗಳಲ್ಲೂ 2024ರ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವನಾಗಿ ಮಾತು ಕೊಡುತ್ತಿದ್ದೇನೆ ಎಂದ ಸಚಿವ ನಾಗೇಂದ್ರ, ಬಳ್ಳಾರಿ ಜಿಲ್ಲೆಯಲ್ಲೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐದಕ್ಕೆ ಐದು ಸ್ಥಾನಗಳನ್ನು ಜಯಗಳಿಸಿದಂತೆ ಬಳ್ಳಾರಿ ಲೋಕಸಭಾ ಸ್ಥಾನವನ್ನ ಸಹ ಗೆದ್ದು ಕೊಡುತ್ತೇವೆ ವಿಶ್ವಾಸ ವ್ಯಕ್ತಪಡಿಸಿದರು.
ನಾನು ಅನೇಕ ರಾಷ್ಟ್ರೀಯ ಪಕ್ಷಗಳನ್ನು ನೋಡಿದ್ದೇನೆ. ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತರ ಪರವಾಗಿ ಇರುವಂತ ಏಕೈಕ ಪಕ್ಷ ಅಂದರೆ ಕಾಂಗ್ರೆಸ್ ಮಾತ್ರ ಎಂದು ತಿಳಿಸಿದರು. 
ಇವತ್ತು ಸಿಬಿಐನವರು ಕೆಪಿಸಿಸಿ ಅಧ್ಯಕ್ಷರಿಗೆ ನೋಟೀಸ್ ಜಾರಿ ಮಾಡುವ ಮೂಲಕ ಅವರ ವೇಗಕ್ಕೆ ಕಡಿವಾಣ ಹಾಕಲು ಯತ್ನಿಸುತ್ತಿದ್ದಾರೆ. ಆದರೆ ಇಲ್ಲಿ ಕುಳಿತಿರುವ ಪ್ರತಿಯೊಬ್ಬರು ಒಬ್ಬ ಡಿ.ಕೆ.ಶಿವಕುಮಾರ್ ಇದ್ದಂತೆ ಎಂದು ಕಾರ್ಯಕರ್ತರಿಗೆ ಅತ್ಮಸ್ಥೈರ್ಯ ತುಂಬಿದರು.
ಪಕ್ಷದ ಕಾರ್ಯಕ್ರಮಗಳು ನಡೆಯುವಾಗ ನಮ್ಮನ್ನ ಕರೆದಿಲ್ಲ ಅಂತ ಯಾರೊಬ್ಬರ ಮೇಲೂ ದೂರಬಾರದು. ಕಾರ್ಯಕ್ರಮ ಕುರಿತು ತಿಳಿದಾಕ್ಷಣ ಬಂದು ಭಾಗವಹಿಸಬೇಕು. ಇದು ಮನೆ ಕಾರ್ಯಕ್ರಮವಲ್ಲ. ಯಾರು ಬರುತ್ತಾರೊ ಅಂತವರು ಗುರುತಿಸಿಕೊಳ್ಳುತ್ತಾರೆ, ಬೆಳೆಯುತ್ತಾರೆ. ಇಲ್ಲವೆಂದರೆ ಮರೆತು ಬಿಡುತ್ತಾರೆ. ನಾನು ಕೂಡ ಯುವ ಕಾಂಗ್ರೆಸ್‍ನಿಂದ ಪಕ್ಷೇತರವಾಗಿ ಅನೇಕ ರೀತಿಯಲ್ಲಿ ಕೆಲಸ ಮಾಡಿ ಇವತ್ತು ನಿಮ್ಮ ಅಶೀರ್ವಾದದಿಂದ ಗೆದ್ದು ಸರ್ಕಾರದಲ್ಲಿ ಮಂತ್ರಿಯಾಗಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಿಮ್ಮ ಮುಂದೆ ನಿಂತಿದ್ದೇನೆ. ಹಾಗಾಗಿ ಲೀಡರ್‍ಶಿಪ್ ಡೆವಲಪ್‍ಮೆಂಟ್ ಕಾರ್ಯಾಗಾರದಲ್ಲಿ ಭಾಗವಹಿಸುವ ಮೂಲಕ ಪಕ್ಷದ ಕಾರ್ಯಕರ್ತರೆಲ್ಲರೂ ನಾಯಕತ್ವದ ಗುಣಗಳನ್ನ ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಬಿಜೆಪಿ ವಿರುದ್ದ ಹರಿಹಾಯ್ದ ಸಚಿವ ನಾಗೇಂದ್ರ, ನಮ್ಮನ್ನು ಯಾರು ಏನೂ ಮಾಡೋಕೆ ಆಗಲ್ಲ. ಒಬ್ಬ ಹೋದರೆ ಇನ್ನೊಬ್ಬ, ಇನ್ನೊಬ್ಬ ಹೋದರೆ ಮತ್ತೊಬ್ಬ. ನಮ್ಮಲ್ಲಿ ಈಗಾಗಲೇ ಹತ್ತುಲೈನ್ ನಾಯಕರಿದ್ದಾರೆ. ಒಬ್ಬರೇ ಇದ್ದಾರೆ ಅಂತ ಬಿಜೆಪಿಯವರಿಗೆ ಭ್ರಮೆ ಇದೆ. ಕಾಂಗ್ರೆಸ್‍ನವರನ್ನು ಯಾರು ಏನೂ ಮಾಡೋಕೆ ಆಗಲ್ಲ ಎಂದು ತಿರುಗೇಟು ನೀಡಿದರು.
ಕೇಂದ್ರ ಸರ್ಕಾರದ ಕುತಂತ್ರದಿಂದ ನಮ್ಮ ಪಕ್ಷದ ಅಧ್ಯಕ್ಷರ ಮೇಲೆ ಸಿಬಿಐನಿಂದ ಬಹಳ ಟಾರ್ಚರ್ ಕೊಡುತ್ತಿದ್ದಾರೆ. ಆದರೂ, ಅವರಿಗೆ ಏನೂ ಆಗೋದಿಲ್ಲ. ನಮ್ಮ ಪಕ್ಷದ ಸ್ಪೀಡ್ ಕಂಟ್ರೋಲ್ ಮಾಡೋದಕ್ಕೆ ಕೇಂದ್ರ ಸರ್ಕಾರ ಈ ರೀತಿ ಹುನ್ನಾರ ಮಾಡುತ್ತಿದೆ. ಇಂತಹ ಹುನ್ನಾರಗಳಿಗೆ ನಾವು ಯಾರೂ ತಲೆ ಕೆಡಿಸಿಕೊಳ್ಳಲ್ಲ. ಡಿ.ಕೆ.ಶಿವಕುಮಾರ್ ಒಬ್ಬರೇ ಅಲ್ಲ. ಕಾಂಗ್ರೆಸ್‍ನವರೆಲ್ಲರೂ ಡಿ.ಕೆ.ಶಿವಕುಮಾರ್ ಇದ್ದಂತೆ. ನಮ್ಮನ್ನು ಯಾರು ಕೂಡ ಏನನ್ನು ಸಹ ಮಾಡೋಕೆ ಆಗಲ್ಲ ಎಂದು ಎಚ್ಚರಿಸಿದರು.
ಬಳ್ಳಾರಿ, ರಾಯಚೂರು ವ್ಯಾಪ್ತಿಯ ಲೀಡರ್‍ಶಿಪ್ ಡೆವಲಪ್‍ಮೆಂಟ್ ಕಾರ್ಯಾಗಾರವನ್ನು ರಾಷ್ಟ್ರೀಯ ಸಂಚಾಲಕ, ಸಿಡಬ್ಲ್ಯುಸಿ ಖಾಯಂ ಆಹ್ವಾನಿತ ಕೆ.ರಾಜು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ನಗರ ಶಾಸಕ ನಾರಾ ಭರತ್‍ರೆಡ್ಡಿ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಜಿಲ್ಲಾಧ್ಯಕ್ಷ ಜಿ.ಎಸ್.ಮಹ್ಮದ್ ರಫೀಕ್, ಯುವಮುಖಂದರಾದ ಸಿದ್ದು ಹಳ್ಳೆಗೌಡ, ವಿಷ್ಣುವರ್ಧನ್ ಬೋಯಪಾಟಿ ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.
ವಾಗ್ವಾದ;
ಕಾರ್ಯಾಗಾರದಲ್ಲಿ ಸಚಿವ ಬಿ.ನಾಗೇಂದ್ರ ಅವರು ಮಾತನಾಡುತ್ತಿದ್ದಾಗ ಪಕ್ಷದ ಕಾರ್ಯಕರ್ತರು ಅಸಮಾಧಾನವನ್ನು ಹೊರಹಾಕಿದರು. ಕಾರ್ಯಕ್ರಮದ ವೇದಿಕೆಯ ಬ್ಯಾನರ್‍ನಲ್ಲಿ ಅಲ್ಪಸಂಖ್ಯಾತ ನಾಯಕರ ಫೋಟೋ ಇಲ್ಲ. ಸದ್ಯ ದೇಶದಲ್ಲೇ ಏಕೈಕ ರಾಜ್ಯಸಭೆ ಸದಸ್ಯರಾದ ಬಳ್ಳಾರಿಯವರೇ ಆಗಿರುವ ಡಾ. ಸೈಯದ್ ನಾಸೀರ್ ಹುಸೇನ್ ಅವರ ಫೋಟೊ ಹಾಕಿಲ್ಲ ಎಂದು ಬುಡಾ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್ ಆಕ್ಷೇಪ ವ್ಯಕ್ತಪಡಿಸಿದರು. ಒಬ್ಬರು ಮಾತನಾಡುತ್ತಿದ್ದಂತೆ ಉಳಿದ ಕಾರ್ಯಕರ್ತರು ಸಹ ಜೋರಾಗಿ ಅಸಮಾಧಾನ ವ್ಯಕ್ತಪಡಿಸಲು ಮುಂದಾದರು. ಕೊನೆಗೆ ವೇದಿಕೆಯಲ್ಲೇ ಎಲ್ಲರಿಗೆ ಕೈ ಮುಗಿದ ಸಚಿವ ನಾಗೇಂದ್ರ ಪಕ್ಷದಲ್ಲಿನ ಶಿಷ್ಟಾಚಾರದ ಪ್ರಕಾರ ಬ್ಯಾನರ್ ಹಾಕಲಾಗಿದೆ. ಯಾರೊಬ್ಬರನ್ನೂ ಅವಮಾನಿಸುವ ಸಲುವಾಗಿ ಫೋಟೊವನ್ನು ಕೈಬಿಟ್ಟಿಲ್ಲ ಎಂದು ಮನವಿ ಮಾಡಿದ ಬಳಿಕ ಪರಿಸ್ಥಿತಿ ತಿಳಿಗೊಂಡಿತು.