ವಿಧಾನಸಭೆ ಫಲಿತಾಂಶದ ಬಳಿಕ ಜೆಡಿಎಸ್ ಛಿದ್ರ:ಜೈರಾಮ್ ರಮೇಶ್

ನವದೆಹಲಿ,ಮೇ.12- ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಜೆಡಿಎಸ್ ವಿಭಜನೆಯಾಗಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಇಂದಿಲ್ಲಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಅಂತ್ರಂತ್ರ ವಿಧಾನಸಭೆ ನಿರ್ಮಾಣವಾಗುವುದಿಲ್ಲ. ಹೀಗಾಗಿ ಸಮ್ಮಿಶ್ರ ಸರ್ಕಾರ ರಚನೆ ಮಾತೇ ಬರುವುದಿಲ್ಲ. ಈ ಚುನಾವಣೆ ಫಲಿತಾಂಶದ ಬಳಿಕ ಜೆಡಿಎಸ್ ಛಿದ್ರವಾಗಲಿದೆ ಎಂದಿದ್ದಾರೆ.

ಮಾಜಿ‌ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಕ್ತರಾಗಿದ್ದಾರೆ. ಯಾರೊಂದಿಗೆ ಸರ್ಕಾರ ರಚಿಸಬೇಕು ಎಂದು ನಿರ್ಧರಿಸಿದ್ದಾರೆ. ಸೂಕ್ತ ಸಮಯದಲ್ಲಿ ಅದನ್ನು ಬಹಿರಂಗ ಮಾಡುತ್ತೇವೆ ಎನ್ನುವ ಜೆಡಿಎಸ್ ವಕ್ತಾರ ತನ್ವೀರ್ ಅಹಮದ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಜೈರಾಮ್ ರಮೇಶ್, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ

ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಪಷ್ಟ ‌ಬಹುಮತ ಗಳಿಸಲಿದೆ. ನಾಲ್ಕು ಎಕ್ಸಿಟ್ ಪೋಲ್‌ಗಳು ಪೂರ್ಣ ಬಹುಮತವನ್ನು ನೀಡುತ್ತವೆ ಮತ್ತು ಕೆಲವು ಪಕ್ಷಕ್ಕೆ ಲಾಭದಾಯಕವಾಗಲಿದೆ ಎಂದಿದ್ದಾರೆ.

ಜೆಡಿಎಸ್ ಅಧ್ಯಕ್ಷ ಸಿಎಂ ಇಬ್ರಾಹಿಂ ಅವರು ತಮ್ಮ ಪಕ್ಷದ ಸಹೋದ್ಯೋಗಿ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ತನ್ವೀರ್ ಅಹ್ಮದ್ ಇನ್ನು ಮುಂದೆ ಪಕ್ಷದ ವಕ್ತಾರರಲ್ಲ ಎಂದು ತಿಳಿಸಿದ್ದಾರೆ.

ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಿರ್ಧರಿಸಿಲ್ಲ, ಪಕ್ಷದ ವಕ್ತಾರ ಎಂದು ತನ್ವೀರ್ ಅಹಮದ್ ಹೇಳಿಕೆ ಆಧಾರ ರಹಿತವಾಗಿದೆ, ನಾಳೆಯ ಫಲಿತಾಂಶಕ್ಕಾಗಿ ಕಾಯುತ್ತೇವೆ ಎಂದಿದ್ದಾರೆ.

ಕಾಂಗ್ರೆಸ್ ಗೆಲುವು: ಮೋದಿ ಸೋಲು

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಪ್ರಧಾನಿ ನರೇಂದ್ರ ಮೋದಿ ಅವರ ಸೋಲು ಎಂದು ಜೈ ರಾಮ್ ರಮೇಶ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಸೋಲಿನ ನಂತರ, 2024 ರಲ್ಲಿ ಕಾಂಗ್ರೆಸ್‌ಗೆ ದೆಹಲಿಯ ಬಾಗಿಲು ತೆರೆಯಲಿದೆ ಎಂದು ಹೇಳಿದ್ದಾರೆ.
.