ವಿಧಾನಸಭೆ ಚುನಾವಣೆ: ಲೋಪದೋಷ ಕಂಡುಬಂದರೆ ಕ್ರಮ: ಜಿಲ್ಲಾಧಿಕಾರಿ

ಬೆಳಗಾವಿ, ಮಾ.19: ಚುನಾವಣಾ ಕರ್ತವ್ಯದಲ್ಲಿ ಯಾವುದೇ ರೀತಿಯ ಲೋಪದೋಷ ಉಂಟಾಗದಂತೆ ಜಾಗರೂಕತೆಯಿಂದ ಹಾಗೂ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ಸಂದರ್ಭದಲ್ಲಿ ಚುನಾವಣೆ ಘೋಷಣೆಯಾಗಬಹುದು. ಆದ್ದರಿಂದ ಎಲ್ಲ ನೋಡಲ್ ಅಧಿಕಾರಿಗಳು ಮತ್ತು ತಂಡಗಳು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಸೂಚನೆ ನೀಡಿದರು.
ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಮತ್ತು ವಿವಿಧ ತಂಡಗಳ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಬೆಳಗಾವಿ ಗಡಿ ಜಿಲ್ಲೆಯಾಗಿರುವುದರಿಂದ ಚುನಾವಣಾ ಸಂದರ್ಭದಲ್ಲಿ ನಗದು, ಮದ್ಯ ಸೇರಿದಂತೆ ವಿವಿಧ ಬಗೆಯ ವಸ್ತುಗಳನ್ನು ಅಕ್ರಮವಾಗಿ ರಾಜ್ಯದ ಇತರೆ ಜಿಲ್ಲೆಗಳಿಗೂ ಸಾಗಿಸುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಚೆಕ್ ಪೆÇೀಸ್ಟ್ ಗಳಲ್ಲಿ ತೀವ್ರ ನಿಗಾ ವಹಿಸಬೇಕು.
ಯಾವುದೇ ರೀತಿಯ ಅಕ್ರಮ ಅಥವಾ ನೀತಿಸಂಹಿತೆ ಉಲ್ಲಂಘನೆ ಕಂಡುಬಂದಾಗ ಫ್ಲೈಯಿಂಗ್ ಸ್ಕ್ವಾಡ್ ಟೀಮ್(ಎಫ್.ಎಸ್.ಟಿ), ಸ್ಟ್ಯಾಟಿಕ್ ಸರ್ವೆಲನ್ಸ್ ಟೀಮ್(ಎಸ್.ಎಸ್.ಟಿ), ವಿಡಿಯೋ ವೀವಿಂಗ್ ಟೀಮ್(ವಿ.ಎಸ್.ಟಿ) ಸೇರಿದಂತೆ ಎಲ್ಲಾ ತಂಡಗಳು ಕೂಡಲೇ ಸ್ಪಂದಿಸಬೇಕು.
24 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ಮೂರು ಪಾಳಿಯಲ್ಲಿ ತಂಡಗಳನ್ನು ನಿಯೋಜಿಸಲಾಗುವುದು ಎಂದರು.
ಯಾವುದೇ ವ್ಯಕ್ತಿ ಅಥವಾ ಪಕ್ಷಗಳ ಜತೆ ಗುರುತಿಸಿಕೊಳ್ಳದೇ ನಿಷ್ಪಕ್ಷಪಾತದಿಂದ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಒಂದು ವೇಳೆ ಲೋಪವೆಸಗಿದರೆ ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಕರ್ತವ್ಯಲೋಪವನ್ನು ಆಯೋಗವು ಗಂಭೀರವಾಗಿ ಪರಿಗಣಿಸಲಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತುಕೊಂಡು ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ ಎಚ್ಚರಿಕೆ ವಹಿಸಬೇಕು.
ಚುನಾವಣೆಯನ್ನು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲ ತಂಡಗಳು ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಬೆಳಗಾವಿ ನಗರ ಪೆÇಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ ಹೇಳಿದರು.
ಫ್ಲ್ಯೈಯಿಂಗ್ ಸ್ಕ್ವಾಡ್(ಎಫ್.ಎಸ್.ಟಿ.), ಸ್ಟ್ಯಾಟಿಕ್ ಸರ್ವೆಲನ್ಸ್ ಟೀಮ್(ಎಸ್.ಎಸ್.ಟಿ), ವಿಡಿಯೋ ಸರ್ವೆಲನ್ಸ್ ಟೀಮ್(ವಿ.ಎಸ್.ಟಿ.), ವಿಡಿಯೋ ವೀವಿಂಗ್ ಟೀಮ್(ವಿ.ವಿ.ಟಿ)ಗಳನ್ನು ಈಗಾಗಲೇ ರಚಿಸಲಾಗಿರುವುದರಿಂದ ತಮ್ಮ ಕೆಲಸಗಳ ಬಗ್ಗೆ ತಿಳಿದುಕೊಳ್ಳಬೇಕು.
ಬೆಳಗಾವಿ ದೊಡ್ಡ ಜಿಲ್ಲೆ ಮತ್ತು ಗಡಿ ಜಿಲ್ಲೆಯಾಗಿರುವುದರಿಂದ ಎಲ್ಲ ತಂಡಗಳು ದಿನದ ಇಪ್ಪತ್ನಾಲ್ಕು ತಾಸು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ತಮಗೆ ವಹಿಸಿಸುವ ಕೆಲಸ ಮಹತ್ವ ಹಾಗೂ ಸ್ವರೂಪವನ್ನು ಸರಿಯಾಗಿ ತಿಳಿದುಕೊಂಡು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬೇಕು.
ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಯಾವುದೇ ದೂರು ಅಥವಾ ಮಾಹಿತಿ ಬಂದರೆ ತಂಡಗಳು ಸಮಯ ವ್ಯರ್ಥ ಮಾಡದೇ ತಕ್ಷಣವೇ ಕಾರ್ಯಪ್ರವೃತ್ತಗೊಳ್ಳಬೇಕು.
ಏನೇ ಗೊಂದಲಗಳಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮುಂದುವರಿಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.