ವಿಧಾನಸಭೆ ಚುನಾವಣೆ ಮತದಾನ ಹಿನ್ನೆಲೆ:ಮೇ 10 ರಂದು ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾ ಚುನಾವಣಾಧಿಕಾರಿ ಆದೇಶ

ಕಲಬುರಗಿ,ಮೇ.6: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಇದೇ‌ ಮೇ 10 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ನೌಕರರು ಮತ್ತು ಸಿಬ್ಬಂದಿ ವರ್ಗ ಮತ ಚಲಾಯಿಸಲು ಅನುಕೂಲವಾಗುವಂತೆ ಜಿಲ್ಲೆಯಾದ್ಯಂತ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು, ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ಖಾಸಗಿ ಸಂಸ್ಥೆಗಳಿಗೆ (ಅನುದಾನಿತ ಶಿಕ್ಷಣ ಸಂಸ್ಥೆಗಳು), ಸ್ಥಳೀಯ ಸಂಸ್ಥೆಗಳು, ರಾಷ್ಟ್ರೀಕೃತ ಹಾಗೂ ಇತರೆ ಬ್ಯಾಂಕುಗಳು ಮುಂತಾದ ಕಚೇರಿಗಳಿಗೆ ಸೀಮಿತಗೊಳಿಸಿ ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ ಕಾಯ್ದೆ-1881ರ ಸೆಕ್ಷನ್ 25ರ ಪ್ರಕಾರ ಸಿಬ್ಬಂದಿಗಳಿಗೆ ವೇತನ ಸಹಿತ ಕಚೇರಿಗಳಿಗೆ ರಜೆ ಘೋಷಿಸಿ ಜಿಲ್ಲಾ ಚುನಾವಣಾಧಿಕಾರಿ ಯಶವಂತ ವಿ. ಗುರುಕರ್ ಆದೇಶಿಸಿದ್ದಾರೆ.

ಹಾಗೆಯೇ ವ್ಯವಹಾರಿಕ ಸಂಸ್ಥೆಗಳು ಔದ್ಯಮಿಕ ಸಂಸ್ಥೆಗಳು (Industrial Undertaking) ಮತ್ತು ಇತರ ಸಾರ್ವಜನಿಕ ಸಂಸ್ಥೆ (Establishment) ಗಳಲ್ಲಿ ಖಾಯಂ ಮತ್ತು ದಿನಗೂಲಿ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರು ಸಹ ಮತದಾನ ಮಾಡಲು ವೇತನ ಸಹಿತ ರಜೆ ಪಡೆಯಲು ಅರ್ಹರಿದ್ದು, ಜಿಲ್ಲೆಯಾದ್ಯಾಂತ ಎಲ್ಲಾ ಕಾರ್ಖಾನೆಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪ್ರಜಾ ಪ್ರತಿನಿಧಿ ಕಾಯ್ದೆ-1951 ಸೆಕ್ಷನ್ 135(ಬಿ) ರಡಿ ಹಾಗೂ ಕೈಗಾರಿಕಾ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬದ ರಜೆಗಳು) ಕಾಯ್ದೆ-1963 ಕಲಂ 3(ಎ) ರನ್ವಯ ಅರ್ಹ ಮತದಾರರಿಗೆ ಮತ ಚಲಾಯಿಸುವುದಕ್ಕಾಗಿ ಎಲ್ಲಾ ಮಾಲೀಕರು ನಿಯೋಜಕರು ಮತದಾನ ಮಾಡಿಕೊಡಲು ವೇತನ ಸಹಿತ ರಜೆ ನೀಡುವಂತೆ ಆದೇಶಿಸಿದೆ.

ಈ ರಜೆಯು ತುರ್ತು ಸೇವೆಗಳ ಮೇಲೆ ಇರುವ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ಕೂಡ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಸಂಬಂಧಿಸಿದ ಇಲಾಖೆ ಹಾಗೂ ಸಂಘ ಸಂಸ್ಥೆಗಳು ವ್ಯವಸ್ಥೆ ಮಾಡತಕ್ಕದ್ದು. ಚುನಾವಣಾ ಕಾರ್ಯಗಳಿಗೆ ನಿಯೋಜಿಸಲ್ಪಟ್ಟ ಎಲ್ಲಾ ಸರ್ಕಾರಿ ನೌಕರರುಗಳು ಚುನಾವಣಾ ಕಾರ್ಯಕ್ಕೆ ಹಾಜರಾಗತಕ್ಕದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಇನ್ನು ಮತದಾನದ ಪೂರ್ವ ತಯಾರಿಗಾಗಿ ಮತದಾನ ಕೇಂದ್ರವಾಗಿ ಗುರುತಿಸಿಕೊಂಡಿರುವ ಜಿಲ್ಲೆಯ ಎಲ್ಲಾ ಸರಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಕಚೇರಿಗೆ ಮೇ 9 ರಂದು ಸಹ ರಜೆ ಘೋಷಿಸಲಾಗಿದೆ.

ಮೇ.13ಕ್ಕೆ ಗುಲಬರ್ಗಾ ವಿ.ವಿ‌ಗೆ ರಜೆ:ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ ನಡೆಯುವ ಪ್ರಯುಕ್ತ ವಿಶ್ವವಿದ್ಯಾಲಯಕ್ಕೆ ಸೀಮಿತಗೊಳಿಸಿ ಮೇ.13 ರಂದು ರಜೆ ಘೋಷಿಸಲಾಗಿದೆ.