ವಿಧಾನಸಭೆ ಕಲಾಪ ಗದ್ದಲದಲ್ಲಿ ಅಂತ್ಯ

ಬೆಂಗಳೂರು, ಸೆ. ೨೪- ವಿಧಾನಮಂಡಲದ ಅಧಿವೇಶನದಲ್ಲಿ ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಚಚಿಸಲು ಸದನವನ್ನು ೧೦ ದಿನಗಳ ಕಾಲ ವಿಸ್ತರಿಸಬೇಕು. ಹಾಗೆಯೇ, ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆಯೂ ಸದನದಲ್ಲಿ ಚರ್ಚೆಗೆ ಅವಕಾಶ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿಂದು ಧರಣಿ ನಡೆಸಿದರು.
ಈ ಧರಣಿಯಿಂದ ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ನಡುವೆ ಮಾತಿನ ಜಟಾಪಟಿ ನಡೆಯಿತು. ಈ ಧರಣಿ, ಗದ್ದಲ, ಕೋಲಾಹಲಗಳ ನಡುವೆಯೇ ವಿಧಾನಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಅವರು ವಿಧಾನಸಭೆಯನ್ನು ಅನಿರ್ದಿಷ್ಠಾವಧಿಗೆ ಮುಂದೂಡಿದರು.
ಇಂದು ಪ್ರಶ್ನೋತ್ತರ ಕಲಾಪ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರುಗಳಾದ ಗಣೇಶ್, ರಂಗನಾಥ್, ರೂಪಕಲಾ, ಆನಂದನ್ಯಾಮೇಗೌಡ, ಶರತ್‌ಬಚ್ಚೇಗೌಡ ಸೇರಿದಂತೆ ಹಲವು ಸದಸ್ಯರು, ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳ ಪ್ರಸ್ತಾಪಿಸಿ, ಚರ್ಚೆ ನಡೆಸಲು ಅವಕಾಶ ಸಿಕ್ಕಿಲ್ಲ. ಅವಕಾಶ ನೀಡಬೇಕು ಎಂದು ಆಗ್ರಹಿಸಿ ವಿಧಾನಸಭಾಧ್ಯಕ್ಷರ ಮುಂದಿನ ಪೀಠಕ್ಕೆ ಆಗಮಿಸಿ ಧರಣಿ ಆರಂಭಿಸಿದರು.
ಇವರ ಜತೆ ಎಲ್ಲ ಕಾಂಗ್ರೆಸ್ ಸದಸ್ಯರು ಜತೆಗೂಡಿ ಸದನವನ್ನು ಹತ್ತು ದಿನಗಳ ಕಾಲ ವಿಸ್ತರಿಸಿ ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗತೊಡಗಿದರು. ಇದರಿಂದ ಸದನದಲ್ಲಿ ಗದ್ದಲ, ಕೋಲಾಹಲದ ವಾತಾವರಣ ರೂಪುಗೊಂಡಿತು.
ಈ ಗದ್ದಲ, ಕೋಲಾಹದಲ್ಲೇ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು, ಹಲವು ಸದಸ್ಯರು ತಮ್ಮ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಲು ಅವಕಾಶ ಸಿಕ್ಕಿಲ್ಲ. ಸದನವನ್ನು ಹತ್ತು ದಿನಗಳ ಕಾಲ ವಿಸ್ತರಿಸಿ ಎಂದು ಒತ್ತಾಯಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಚರ್ಚೆಗೆ ಅವಕಾಶ ಆಗಿಲ್ಲ. ಅಕ್ಟೋಬರ್ ೧ ರಿಂದ ಈ ನೀತಿಯನ್ನು ಜಾರಿ ಮಾಡುತ್ತಿದ್ದೀರಿ. ನಾಗಪುರದ ನೀತಿ ಇದಾಗಿದೆ. ಇದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲ. ಆರ್‌ಎಸ್‌ಎಸ್ ಶಿಕ್ಷಣ ನೀತಿ ಎಂದು ವಾಗ್ದಾಳಿ ನಡೆಸಿದರು.
ಸಿದ್ಧರಾಮಯ್ಯನವರ ಮಾತಿಗೆ ಪ್ರತಿ ಉತ್ತರ ನೀಡಿದ ಮುಖ್ಯಮಂತ್ರಿ ಬಸವರಾಜಬೊಮಾಮಾಯಿ ಅವರು, ಹೌದು, ಇದು ಆರ್‌ಎಸ್‌ಎಸ್ ಶಿಕ್ಷಣ ನೀತಿಯೆ. ರಾಷ್ಟ್ರೀಯ ಸ್ವಯಂ ಸೇವಕ ಶಿಕ್ಷಣ ನೀತಿ ಎಂದೇ ಹೇಳಿ ಪರವಾಗಿಲ್ಲ. ಆರ್‌ಎಸ್‌ಎಸ್ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ರಾಷ್ಟ್ರ ನಿರ್ಮಾಣಕ್ಕೆ ಬದ್ಧವಾಗಿದೆ. ನೂತನ ಶಿಕ್ಷಣ ನೀತಿಯು ಭವಿಷ್ಯದಲ್ಲಿ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಬುನಾದಿಯಾಗಲಿದೆ. ಯುವಕರ ಭವಿಷ್ಯಕ್ಕೂ ಒಳ್ಳೆಯದಿದೆ. ಕಸ್ತೂರಿ ರಂಗನ್ ನೇತೃತ್ವದ ಸಮಿತಿ ಹಲವು ವರ್ಷಗಳ ಕಾಲ ಅಧ್ಯಯನ ಮಾಡಿ ಈ ನೀತಿಯನ್ನು ರೂಪಿಸಿದೆ. ಈ ನೀತಿಯನ್ನು ಜಾರಿ ಮಾಡೇ ಮಾಡುತ್ತೇವೆ ಇದರಲ್ಲಿ ಬದಲಾವಣೆ ಇಲ್ಲ ಎಂದು ಎದಿರೇಟು ನೀಡಿದರು.
ಮುಖ್ಯಮಂತ್ರಿಗಳ ಮಾತಿನಿಂದ ಕೆರಳಿದ ಸಿದ್ಧರಾಮಯ್ಯ, ಈ ರೀತಿ ಸರ್ವಾಧಿಕಾರದಿಂದ ವರ್ತಿಸುವುದು ಸರಿಯಲ್ಲ. ನಿಮ್ಮ ತಾಲಿಬಾನ್ ಧೋರಣೆಯನ್ನು ಒಪ್ಪಲ್ಲ. ಪ್ರಜಾಪ್ರಭುತ್ವದಲ್ಲಿ ಚರ್ಚೆಯಾಗಬೇಕು. ಚರ್ಚೆಯಾಗದೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡುವುದು ಸರಿಯಲ್ಲ ಎಂದರು.
ಈ ಹಂತದಲ್ಲಿ ಆಡಳಿತ ಪಕ್ಷದ ಸದಸ್ಯರು ಎದ್ದು ನಿಂತ ಆರ್‌ಎಸ್‌ಎಸ್ ಪರ ಘೋಷಣೆಗಳನ್ನುಕೂಗಿದರು.
ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು, ಶಿಕ್ಷಣ ನೀತಿಯನ್ನು ಸಮರ್ಥಿಸಿಕೊಂಡು, ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಇದನ್ನು ಜಾರಿ ಮಾಡಿದ್ದೇವೆ. ಇದನ್ನು ನೀವು ಆರ್‌ಎಸ್‌ಎಸ್ ಶಿಕ್ಷಣ ನೀತಿ ಎಂದರೂ ನಾವೇನು ಬೇಸರಪಟ್ಟುಕೊಳ್ಳುವುದಿಲ್ಲ. ಆರ್‌ಎಸ್‌ಎಸ್ ರಾಷ್ಟ್ರ ಸೇವೆಗೆ ಸಮರ್ಪಿತವಾಗಿರುವ ಸಂಸ್ಥೆ. ಆರ್‌ಎಸ್‌ಎಎಸ್ ಶಿಕ್ಷಣ ನೀತಿ ಎಂದು ಹೇಳಿದರೆ ಅದನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇವೆ ಎಂದು ಗದಲ್ಲದಲ್ಲೇ ಹೇಳಿದರು.
ಈ ಹಂತದಲ್ಲಿ ಕಾಂಗೆಸ್ ಸದಸ್ಯರು, ಘೋಷಣೆಗಳನ್ನು ಕೂಗತೊಡಗಿದರು ಅದಕ್ಕೆ ಪ್ರತಿಯಾಗಿ ಆಡಳಿತಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಿದ್ದರಿಂದ ಸದನದಲ್ಲಿ ಗದ್ದಲ ತಾರಕಕ್ಕೇರಿ ಕೋಲಾಹಲದ ವಾತಾವರಣ ನಿರ್ಮಾಣಗೊಂಡಿತು.
ಧರಣಿ ನಿರತ ಕಾಂಗ್ರೆಸ್ ಸದಸ್ಯರು ಆರ್‌ಎಸ್‌ಎಸ್ ಶಿಕ್ಷಣ ನೀತಿಯನ್ನು ಜಾರಿ ಮಾಡಿದ್ದೀರಾ ಗೂಡ್ಸೆ ವಿಶ್ವವಿದ್ಯಾಲಯ ಯಾವಾಗ ಎಂದು ಏರಿದ ಧ್ವನಿಯಲ್ಲಿ ಘೋಷಣೆಗಳನ್ನು ಕೂಗರಾಲಂಭಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಆರ್‌ಎಸ್‌ಎಸ್ ಜಿಂದಾಬಾಂದ್ ಎಂಬ ಘೋಷಣೆಗಳನ್ನು ಹಾಕಿದರು.
ಧರಣಿ ನಿರತ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ, ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ಭಿತ್ತಿ ಪತ್ರ ಪ್ರದರ್ಶಿಸಿ ಘೋಷಣೆ ಹಾಕುವುದನ್ನು ಮುಂದುವರೆಸಿದರು.
ಹಾಗೆಯೇ ಪ್ರತಿಯಾಗಿ ಬಿಜೆಪಿ ಸದಸ್ಯರುಗಳು ಆರ್‌ಎಸ್‌ಎಸ್ ಪರ, ಮೋದಿ ಪರ ,ಸರ್ಕಾರದ ಪರ ಘೋಷಣೆಗಳನ್ನು ಕೂಗತೊಡಗಿದರು.
ಈ ಗದ್ದಲದಲ್ಲೇ ಸಭಾಧ್ಯಕ್ಷರು ಕೊರೊನಾಗೆ ಸಂಬಂಧಿಸಿದಂತೆ ಸರ್ಕಾರದ ಉತ್ತರವನ್ನು ಮಂಡಿಸಲು ಸೂಚನೆ ನೀಡಿ, ಗಮನ ಸೆಳೆಯುವ ಸೂಚನೆಗಳ ಉತ್ತರಗಳನ್ನು ಮಂಡಿಸಿ ಸದನದ ಕಲಾಪಲಗಳ ವರದಿಯನ್ನು ಓದಿ ನಂತರ ಇಂದು ಮಧ್ಯಾಹ್ನ ಲೋಕಸಭಾಧ್ಯಕ್ಷ ಓಂಬಿರ್ಲಾ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಅಧಿವೇಶನದಲ್ಲಿ ಪಾಲ್ಗೊಳ್ಳಿ ಅಧಿವೇಶನ ಬಹಿಷ್ಕರಿಸುವುದು ಸರಿಯಲ್ಲ ಎಂದು ಕಾಂಗ್ರೆಸ್ ಸದಸ್ಯರಿಗೆ ಹೇಳಿ, ನಿಮ್ಮ ತೀರ್ಮಾನಗಳನ್ನು ಪುನರ್ ಪರಿಶೀಲಿಸಿ ಎಂದು ಕಾಂಗ್ರೆಸ್ ಸದಸ್ಯರಿಗೆ ಮನವಿ ಮಾಡಿ, ಗದ್ದಲ, ಘೋಷಣೆಗಳ ನಡುವೆಯೇ ಸದನವನ್ನು ಅನಿರ್ಧಿಷ್ಠಾವಧಿಗೆ ಮುಂದೂಡಿರುವುದಾಗಿ ಪ್ರಕಟಿಸಿದರು. ನಂತರ ರಾಷ್ಟ್ರಗೀತೆಯನ್ನು ನುಡಿಸಿ ಸದನವನ್ನು ಸಮಾಪ್ತಿಗೊಳಿಸಲಾಯಿತು.