ವಿಧಾನಸಭೆಯಲ್ಲಿ ಲೋಕಸಭೆ ಸ್ಪೀಕರ್ ಭಾಷಣ, ಕಾಂಗ್ರೆಸ್ ಬಹಿಷ್ಕಾರ: ಡಿಕೆ ಶಿ

ಬೆಂಗಳೂರು,ಸೆ.23- ‘ಸಂಸದೀಯ ವ್ಯವಸ್ಥೆಯಲ್ಲಿ ವಿಧಾನಸಭೆಯಲ್ಲಿ ಸದಸ್ಯರು, ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರನ್ನು ಹೊರತುಪಡಿಸಿ ಬೇರೆಯವರು ಸಭೆ ನಡೆಸಿ, ಭಾಷಣ ಮಾಡಲು ಅವಕಾಶವಿಲ್ಲ.ಹೀಗಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಕರೆಸಿ ನಾಳೆ ಸಭೆ ಮಾಡುತ್ತಿರುವುದನ್ನು ಕಾಂಗ್ರೆಸ್ ಬಹಿಷ್ಕರಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಅನೇಕ ಇತಿಹಾಸ ಇರುವ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಕೆಟ್ಟ ಪದ್ಧತಿ ಸೃಷ್ಟಿಸಲು ಹೊರಟಿದೆ ಎಂದು ದೂರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ, ಪ್ರಜಾಪ್ರಭುತ್ವ ಸಂಸದೀಯ ಮೌಲ್ಯಗಳ ರಕ್ಷಣೆ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಕರೆಸಿ, ವಿಧಾನ ಮಂಡಲದ ಉಭಯ ಸದನಗಳ ಸದಸ್ಯರನ್ನು ಸೇರಿಸಿ ವಿಧಾನಸಭೆಯಲ್ಲಿ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ ಎಂದರು.

ಸಂಸದೀಯ ವ್ಯವಸ್ಥೆಯಲ್ಲಿ ಉಭಯ ಸದನಗಳಲ್ಲಿ ಇಂತಹ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ. ಆದರೂ ವಿಧಾನಸಭೆಯಲ್ಲಿ ಈ ಕಾರ್ಯಕ್ರಮ ನಡೆಸಲು ಸರ್ಕಾರ ಮುಂದಾಗಿದೆ.ಸಂಸದೀಯ ವ್ಯವಹಾರಗಳ ಸಲಹಾ ಸಮಿತಿಯಲ್ಲಿ ಈ ವಿಚಾರ ಪ್ರಸ್ತಾಪವಾದಾಗ, ನಮ್ಮ ಶಾಸಕಾಂಗ ಪಕ್ಷದ ನಾಯಕರೂ ಆದ ವಿರೋಧ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದರು.

ಕಾರ್ಯಕ್ರಮ ವಿಚಾರವಾಗಿ ಸರ್ಕಾರ ವಿರೋಧ ಪಕ್ಷದ ನಾಯಕರ ಜತೆ ಚರ್ಚೆ ಮಾಡಿಲ್ಲ. ಆದರೂ ಆಹ್ವಾನ ಪತ್ರಿಕೆ ಹಂಚುತ್ತಿದ್ದಾರೆ. ಈ ಸಭೆ ಮೂಲಕ ನಿಮ್ಮ ಸರ್ಕಾರದ ಅವಧಿಯಲ್ಲಿ ಸಂಸದೀಯ ಮೌಲ್ಯ ಕುಸಿಯುತ್ತಿದೆ ಎಂದು ನೀವು ಒಪ್ಪಿಕೊಳ್ಳುತ್ತಿದ್ದೀರಿ. ಈ ಕಾರ್ಯಕ್ರಮ ನಡೆಸುವುದಾದರೆ ಬ್ಯಾಂಕ್ವೆಟ್ ಹಾಲ್ ನಲ್ಲಿ ಮಾಡಿ, ನಮ್ಮ ಅಭ್ಯಂತರವಿಲ್ಲ. ಆಹ್ವಾನ ಕೊಟ್ಟರೆ ನಾವೂ ಬರುತ್ತೇವೆ ಎಂದು ನಾವು ಸಲಹೆ ನೀಡಿದ್ದೆವು. ಸರ್ಕಾರ ಇದನ್ನು ಒಪ್ಪದೇ, ವಿಧಾನಸಭೆಯಲ್ಲಿ ಮಾಡುತ್ತೇವೆ ಎಂದು ಪಟ್ಟು ಹಿಡಿದಿದೆ ಎಂದರು.

ವಿಧಾನಸಭೆಯಲ್ಲಿ ಕಾರ್ಯಕ್ರಮ ಮಾಡುತ್ತಿರುವ ಬಗ್ಗೆ ಪಕ್ಷ ಚರ್ಚೆ ಮಾಡಿದೆ. ಈ ರೀತಿಯ ಕೆಟ್ಟ ಪದ್ಧತಿ ಆರಂಭಿಸುತ್ತಿರುವುದನ್ನು ವಿರೋಧಿಸಿ ಈ ಕಾರ್ಯಕ್ರಮ ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ ಎಂದರು

ವಿಧಾನಸಭೆಯನ್ನು ರಾಜಕೀಯ ವೇದಿಕೆಯನ್ನಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ಸ್ಪೀಕರ್ ಅವರಿಗೆ ಗೌರವಯುತವಾಗಿ ಮನವಿ ಮಾಡಿದರೂ ಸ್ಪಂದಿಸದೆ ಈ ಕಾರ್ಯಕ್ರಮ ಮಾಡಲು ಮುಂದಾಗಿದ್ದಾರೆ ಎಂದು ದೂರಿದರು