
ಯಾದಗಿರಿ : ಮೇ 12: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಯಾದಗಿರಿ ಜಿಲ್ಲೆಯಾದ್ಯಂತ ನಡೆದ ಮತದಾನದಲ್ಲಿ 687672 ಮತದಾರರು ಮತ ಚಲಾಯಿಸಿದ್ದು, ಒಟ್ಟು ಪ್ರತಿಶತ 68.77 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಶ್ರೀಮತಿ ಸ್ನೇಹಲ್.ಆರ್ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಅವರು ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಪ್ರತಿಶತ 68.77 ರಷ್ಟು ಮತದಾನವಾಗಿದೆ. ಶೋರಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಶತ 75.16 ರಷ್ಟು ಮತದಾನವಾಗಿದೆ. ಶಹಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಶತ 69.16 ರಷ್ಟು ಮತದಾನವಾಗಿದೆ. ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಶತ 64.88 ರಷ್ಟು ಮತದಾನವಾಗಿದೆ. ಗುರುಮಿಠಕಲ್ ವಿಧಾನಸಭಾ ಕ್ಷೇತ್ರದಲ್ಲಿ 65.03 ರಷ್ಟು ಮತದಾನವಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ 9,99,959 ಮತದಾರರು ಇದ್ದು, ಈ ಪೈಕಿ 6,87,672 ಮತದಾರರು ಮತ ಚಲಾಯಿಸಿದ್ದು, ಇದರಲ್ಲಿ 3,50,172 ಪುರುಷ ಮತದಾರರು ಹಾಗೂ 3,37,490 ಮಹಿಳಾ ಮತದಾರರು ಮತ್ತು 10 ಇತರೆ ಮತದಾರರು ಮತ ಚಲಾಯಿಸಿದ್ದಾರೆ. ಶೋರಾಪುರ ವಿಧಾನಸಭಾ ಕ್ಷೇತ್ರದಲ್ಲಿ 2,06,996, ಶಹಾಪೂರ ವಿಧಾನಸಭಾ ಕ್ಷೇತ್ರದಲ್ಲಿ 1,65,274 ಮತದಾರರು, ಯಾದಗಿರಿ ವಿಧಾನಸಭಾ ಕ್ಷೇತ್ರದಲ್ಲಿ 1,54,031 ಮತದಾರರು ಹಾಗೂ ಗುರುಮಿಟಕಲ್ ವಿಧಾನಸಭಾ ಕ್ಷೇತ್ರದಲ್ಲಿ 1,61,371 ಮತದಾರರು ಮತ ಚಲಾಯಿಸಿದ್ದಾರೆ ಎಂದು ತಿಳಿಸಿದರು.
ಕಳೆದ ಬಾರಿಯ ಚುನಾವಣೆಗೆ ಹೋಲಿಸಿದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಶೇಕಡ 3 ರಷ್ಟು ಮತದಾನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇದಕ್ಕಾಗಿ ಜಿಲ್ಲೆಯ ಮತದಾರರಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ಹಿರಿಯ ಮತದಾರರು ಮತ್ತು ವಿಕಲಚೇತನ ಮತದಾರರಿಗೆ ಸಹಕಾರ ನೀಡಿದವರಿಗೆ ಅವರು ಅಂಭಿನಂದನೆ ಸಲ್ಲಿಸಿದರು.
ಮತ ಎಣಿಕೆಗೆ ಸಕಲಕ್ರಮ : ಪ್ರಸಕ್ತ ವಿಧಾನಸಭಾ ಕ್ಷೇತ್ರದ ಚುನಾವಣೆ ಸಂಬಂಧಿಸಿದಂತೆ ಮತ ಎಣಿಕೆಗಾಗಿ ಸಕಲಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಮತ ಎಣಿಕೆಯು ಇದೇ 2023ರ ಮೇ 13ರ ಶನಿವಾರ ರಂದು ಬೆಳಿಗ್ಗೆ 8 ಗಂಟೆಗೆ ಯಾದಗಿರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜುದಲ್ಲಿ ನಡೆಯಲಿದೆ. ಈ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆ ಸಂಬಂಧ 64 ಎಣಿಕೆ ಮೇಲ್ವಿಚಾರಕರು, 64 ಎಣಿಕೆ ಸಹಾಯಕರು ಮತ್ತು 72 ಮೈಕ್ರೋ ಆಬ್ಜರ್ವರಗಳನ್ನು ನೇಮಕ ಮಾಡಲಾಗಿದ್ದು, ಸದರಿಯವರಿಗೆ ತರಬೇತಿ ನೀಡಲಾಗಿರುತ್ತದೆ.
ಸದರಿ ಮತ ಎಣಿಕೆ ಸಿಬ್ಬಂದಿಯ ರ್ಯಾಂಡಮೈಜೆಷನ್ ಮಾಡಲಾಗಿದೆ.
ಈ ಮತ ಎಣಿಕೆಗಾಗಿ 8 ಭದ್ರತಾ ಕೋಣೆಗಳು, 4 ಮತ ಎಣಿಕೆ ವೀಕ್ಷಕರ ಕೋಣೆಗಳು, ಮತ ಎಣಿಕೆಗಾಗಿ 7 ಕೋಣೆಗಳನ್ನು ಗುರುತಿಸಲಾಗಿದ್ದು, ಪ್ರತಿಯೊಂದು ಕೋಣೆಯಲ್ಲಿ ಒಟ್ಟು 16 ಟೇಬಲ್‍ಗಳ (14 ಟೇಬಲ್‍ಗಳಲ್ಲಿ ಇವಿಎಮ್ ಮತಯಂತ್ರಗಳು ಹಾಗೂ 2 ಟೇಬಲ್‍ಗಳಲ್ಲಿ ಅಂಚೆ ಮತ ಪತ್ರ ಹಾಗೂ ಇಟಿಪಿಬಿಎಸ್ ಸಿದ್ದತೆ ಮಾಡಕೊಳ್ಳಲಾಗಿದ್ದು, ಮತ ಎಣಿಕೆ ನಡೆಯಲಿದೆ. ಅಂಚೆ ಮತ ಪತ್ರ ಹಾಗೂ ಇಟಿಪಿಬಿಎಸ್‍ಗಳ ಮೇಲ್ವಿಚಾರಣೆಗಾಗಿ 4 ಹೆಚ್ಚುವರಿ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.
1 ಮೀಡಿಯಾ ಸೆಂಟರ್ ಸ್ಥಾಪನೆ, 2 ಮೊಬೈಲ್ ಕಲೆಕ್ಷನ ಸೆಂಟರ್ ಸ್ಥಾಪನೆ, 1 ಜಿಲ್ಲಾ ಚುನಾವಣಾಧಿಕಾರಿಗಳ ಕೋಣೆ ಸ್ಥಾಪಿಸಲಾಗಿದೆ.
ಚುನಾವಣಾಧಿಕಾರಿಗಳು ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳ ಮತ ಎಣಿಕೆ ಕೇಂದ್ರದ ಹಾಗೂ ಸಮಯದ ಕುರಿತು ಮಾಹಿತಿ ನೀಡಿರುತ್ತಾರೆ. ಮತ ಎಣಿಕೆ ಕೇಂದ್ರದಲ್ಲಿ ಸಿಸಿ ಟಿ.ವಿಗಳನ್ನು ವೀಕ್ಷಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಮತ ಎಣಿಕೆ ಫಲಿತಾಂಶದ ಮಾಹಿತಿಯನ್ನು ವಿಧಾನಸಭಾ ಕ್ಷೇತ್ರವಾರು ಧ್ವನಿವರ್ಧಕದ ಮೂಲಕ ನೀಡಲು ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಸದರಿ ಸಿಬ್ಬಂದಿಗಳು ಪ್ರತಿ ಸುತ್ತಿನ ಮತಗಳ ಮಾಹಿತಿ ನೀಡುವರು. ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ಮತ ಎಣಿಕೆ ಕೇಂದ್ರಗಳಲ್ಲಿ, ಶುದ್ಧ ಕುಡಿಯುವ ನೀರು (ಮತ ಎಣಿಕೆ ಕೇಂದ್ರದ ಹೊರಗಡೆ) ಸ್ವಚ್ಛತೆ, ನಿರಂತರ ವಿದ್ಯುತ್, ಅಗ್ನಿ ಶಾಮಕ ದಳದ ವಾಹನ, ಮತ ಎಣಿಕೆ ಸಿಬ್ಬಂದಿಯ ಆರೈಕೆಗಾಗಿ ಪ್ರತಿ 500 ಸಿಬ್ಬಂದಿಗಳಿಗೆ 1 ಮೆಡಿಕಲ್ ಕ್ಯಾಂಪ್, ಮತ ಎಣಿಕೆ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ಮೀಡಿಯಾ ಸೆಂಟರ್ ವೈಫೈ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಮತ ಎಣಿಕೆ ಕೇಂದ್ರ ವ್ಯಾಪ್ತಿಯಲ್ಲಿ ಸೂಕ್ತ ಪೊಲೀಸ್ ಬಂದೊಬಸ್ತ ಮಾಡಲಾಗಿದೆ. ಯಾಕೂಬ್ ಬುಖಾರಿ ದರ್ಗಾದಿಂದ ಕನಕದಾಸ ವೃತ್ತದ ವರೆಗೆ ಮತ ಎಣಿಕೆ ಸಂದರ್ಭದಲ್ಲಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಹಾಗೂ ಇತರರು ಉಪಸ್ಥಿತರಿದ್ದರು.