ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಕಲ ಸಿದ್ಧತೆ : ಕಲ್ಪಶ್ರೀ

ತಿಪಟೂರು, ಏ. ೩- ಭಾರತೀಯ ಚುನಾವಣಾ ಆಯೋಗವು ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಿದ್ದು ತಿಪಟೂರು ತಾಲ್ಲೂಕಿನಲ್ಲಿ ಚುನಾವಣೆ ಎದುರಿಸಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿರುವುದಾಗಿ ಚುನಾವಣಾಧಿಕಾರಿ ಸಿ.ಆರ್.ಕಲ್ಪಶ್ರೀ ತಿಳಿಸಿದರು.
ನಗರದ ಮಿನಿ ವಿಧಾನಸೌಧದಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ನೀಡಿದ ಅವರು, ತಿಪಟೂರು ತಾಲ್ಲೂಕಿನಲ್ಲಿ ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಸಿ.ಆರ್.ಕಲ್ಪಶ್ರೀ ಕಾರ್ಯನಿರ್ವಹಿಸಲಿದ್ದು, ಸಹಾಯಕ ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಪವನ್‌ಕುಮಾರ್, ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿಯಾಗಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎಚ್.ಎಂ.ಸುದರ್ಶನ್ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ೧,೮೩,೧೩೬ ಮತದಾರರಿದ್ದು ೮೮,೯೫೭ ಪುರುಷರು, ೯೪,೧೭೮ ಮಹಿಳೆಯರು, ಯುವ ಮತದಾರರು ೪೧೩೨, ತೃತೀಯ ಲಿಂಗಿಗಳು ಒಬ್ಬರು ನೋಂದಣಿ ಮಾಡಿಸಿಕೊಂಡಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು ೨೩೩ ಮತಗಟ್ಟೆಗಳಿದ್ದು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳು ೬೧ , ಮಹಿಳಾ ಮತಗಟ್ಟೆಗಳು ೫, ವಿಕಲಚೇತನ ಮತಗಟ್ಟೆ ೧, ಯುವ ಅಧಿಕಾರಿಗಳ ಮತಗಟ್ಟೆ ೨ ಇರಲಿವೆ. ತಿಪಟೂರಿನಲ್ಲಿ ಒಟ್ಟು ೩ ಚೆಕ್ ಪೋಸ್ಟ್‌ಗಳು ಕಾರ್ಯನಿರ್ವಹಿಸಲಿದ್ದು ಬನ್ನಿಹಳ್ಳಿ ಗೇಟ್(ಮೇಲಾಪುರ) , ಬಿದರೆಗುಡಿ, ಗುಂಗರಮಳೆ ಆಗಿವೆ.
ತಾಲ್ಲೂಕಿನಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ದೂರು ನೀಡಲು, ಚುನಾವಣೆ ಸಂಬಂಧಿತ ಮಾಹಿತಿಗಾಗಿ ಕಂಟ್ರೋಲ್ ರೂಂ ತೆರೆಯಲಾಗಿದ್ದು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಪೋನ್ : ೦೮೧೩೪-೨೫೧೦೩೯. ಚುನಾವಣೆಯ ಸಂಪೂರ್ಣ ಕಾರ್ಯವೈಖರಿಗಾಗಿ ಮಸ್ಟರಿಂಗ್ ಕೇಂದ್ರ, ಡಿ.ಮಸ್ಟರಿಂಗ್ ಕೇಂದ್ರ ಹಾಗೂ ಭದ್ರತಾ ಕೊಠಡಿಗಳನ್ನು ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಮಾಡಲಾಗಿದೆ ಎಂದರು.
ಚುನಾವಣೆಯಲ್ಲಿ ೨೩೩ ಬೂತ್‌ಗಳಲ್ಲಿ ಪಿ.ಆರ್.ಓ ಆಗಿ ೨೫೭, ಎಪಿಆರೋ ಆಗಿ ೨೫೭, ಪಿ.ಓ ಆಗಿ ೫೧೪, ಮೈಕ್ರೋ ಅಬ್ಸಾರ್ವರ್ಸ್ ಆಗಿ ೬೧ ಒಟ್ಟು ೧೦೮೯ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ.
ತಾಲ್ಲೂಕಿನಲ್ಲಿ ಪ್ರಥಮ ಬಾರಿಗೆ ಅಂಗವಿಕರಿಗೆ ಮತ್ತು ೮೦+ ವಯಸ್ಸಿನ ಮತದಾರರಿಗೆ ಅಂಚೆ ಮತ ಪತ್ರಗಳ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿದ್ದು, ವಿಕಲಚೇತನ ಮತದಾರರು ೨೩೩೨, ೮೦+ ವಯಸ್ಸಿನ ಮತದಾರರು ೪೫೪೮ ಮಂದಿ ಒಟ್ಟು ೬,೮೮೦ ಮತದಾರರಿದ್ದಾರೆ. ಇವರಿಗೆ ಅನುಕೂಲವಾಗುವಂತೆ ನಮೂನೆ ? ೧೨ಡಿ ಮೂಲಕ ಅರ್ಜಿಯನ್ನು ಮೊದಲಿಗೆ ನೀಡಲಾಗಲಿದ್ದು ಅವಶ್ಯವಿರುವವರು ಇದರ ಸದ್ಬಳಕೆ ಮಾಡಿಕೊಳ್ಳಬಹುದು. ಇಲ್ಲವಾದಲ್ಲಿ ಮತಗಟ್ಟೆಗೆ ತೆರಳಿ ಮತ ಚಲಾವಣೆ ಮಾಡಬಹುದು. ನಮೂನೆ- ೧೨ ಡಿ ನೀಡಿದವರ ಮನೆಗೆ ತೆರಳಿ ಅಂಚೆ ಮತದಾನವನ್ನು ಸ್ಥಳದಲ್ಲಿಯೇ ಮಾಡಿಸಿಕೊಳ್ಳಲಾಗುವುದು. ಪ್ರತಿ ಮನೆಗೆ ೨ ಬಾರಿ ಮಾತ್ರವೇ ತೆರಲಿದ್ದು ಒಮ್ಮೆ ಅವಕಾಶ ತಪ್ಪಿದಲ್ಲಿ ಪುನಃ ಪಡೆದುಕೊಳ್ಳಬಹುದಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಚುನಾವಣಾ ಆಯೋಗದಿಂದ ಬರುವಂತಹ ಎಲ್ಲ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಲಾಗುವುದು. ಅಲ್ಲದೇ ಚುನಾವಣೆ ಅಕ್ರಮಗಳ ಮೇಲೂ ನಿಗಾವಹಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಪವನ್‌ಕುಮಾರ್, ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿ ಎಚ್.ಎಂ.ಸುದರ್ಶನ್, ಡಿವೈಎಸ್‌ಪಿ ಸಿದ್ದಾರ್ಥ ಗೋಯಲ್, ನಗರಸಭೆಯ ಪೌರಾಯುಕ್ತ ವಿಶ್ವೇಶ್ವರಯ್ಯ ಮತ್ತಿತರರು ಉಪಸ್ಥಿತರಿದ್ದರು.