ವಿಧಾನಸಭಾ ಸಾರ್ವತ್ರಿಕ ಚುನಾವಣೆ:ಗೃಹರಕ್ಷಕದಳ ಸಿಬ್ಬಂದಿಗಳಿಗೆ ಎರಡು ದಿನಗಳ ವಿಶೇಷ ತರಬೇತಿ

ಕಲಬುರಗಿ,ಮಾ.28:ಮುಂಬರುವ ವಿಧಾನಸಭೆ ಚುನಾವಣೆ-2023ರ ಪ್ರಯುಕ್ತ ಗೃಹರಕ್ಷಕ ದಳ ಮತ್ತು ಪೌರರಕ್ಷಣೆಯ ಮಹಾ ಸಮಾದೇಷ್ಟರ ನಿರ್ದೇಶನದಂತೆ ಕಲಬುರಗಿ ನಗರದ ರಾಜಾಪೂರ ರಸ್ತೆಯಲ್ಲಿರುವ ಗೃಹರಕ್ಷಕದಳದ ಕಚೇರಿ ಆವರಣದಲ್ಲಿ ಗೃಹ ರಕ್ಷಕದಳ ಸಿಬ್ಬಂದಿಗಳಿಗೆ ಇದೇ ಮಾರ್ಚ್ 25 ಹಾಗೂ 26 ರಂದು ಎರಡು ದಿನಗಳ ವಿಶೇಷ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

   ಈ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಸಂತೋಷ ಪಾಟೀಲ ಅವರು ಮಾತನಾಡಿ ಮುಂಬರುವ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಂದೋಬಸ್ತು ಕರ್ತವ್ಯ ನಿರ್ವಹಣೆ ಕುರಿತು ಮಾಹಿತಿ ನೀಡಿದಲ್ಲದೇ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಹಾಗೂ ಗೃಹರಕ್ಷಕರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಮುಂಬರುವ ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ನಡೆಯಲು ಈಗಿನಿಂದಲೇ ಸನ್ನದ್ಧರಾಗಬೇಕು ಎಂದರು.

ಜಿಲ್ಲಾ ಬೋಧಕರಾದ ಹಣಮಂತರಾಯಗೌಡ ಅವರು ಮಾತನಾಡಿ ಗೃಹ ರಕ್ಷಕದಳ ಕಾರ್ಯಗಳು ಹಾಗೂ ಸೇವೆಗಳ ಕುರಿತು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಜಿಲ್ಲಾ ಗೃಹರಕ್ಷಕದಳದ ಉಪ ಸಮಾದೇಷ್ಟರಾದ ಮಲ್ಲಪ್ಪ ಅವರು ಮಾತನಾಡಿ ಚುನಾವಣೆ ನೀತಿ ಸಂಹಿಂತೆ ಪ್ರಾರಂಭವಾದಾಗಿನಿಂದ ಮುಗಿಯುವ ಅವಧಿಯಲ್ಲಿ ಗೃಹರಕ್ಷಕರು ನಿರ್ವಹಿಸಬೇಕಾದ ಕರ್ತವ್ಯಕುರಿತು ತಿಳಿಸಿಕೊಟ್ಟರು.

ಕಾರ್ಯಾಗಾರದಲ್ಲಿ ಸೀನಿಯರ್ ಪ್ಲಾಟೂನ್ ಕಮಾಂಡರ್ ಲಿಂಗಣ್ಣ ಪೂಜಾರಿ, ಪ್ಲಾಟೂನ್ ಕಮಾಂಡರ್ ಚಂದ್ರಕಾಂತ ಹಾವನೂರ, ಮಲ್ಲಯ್ಯಾಸ್ವಾಮಿ, ಬಸಯ್ಯಾ ಸ್ವಾಮಿ ಸೇರಿದಂತೆ ಪುರುಷ ಮತ್ತು ಮಹಿಳಾ ಗೃಹರಕ್ಷಕರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.