
ವಿಜಯಪುರ,ಎ.1 : ವಿಧಾನಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಬಿಜಾಪುರ ನಗರ ವಿಧಾನಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳಾದ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಅವರು ಮತಕ್ಷೇತ್ರ ವ್ಯಾಪ್ತಿಯ ಗೋದಾಮುಗಳಿಗೆ ದಿಢೀರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶುಕ್ರವಾರ ಸೆÉಕ್ಟರ್ ಅಧಿಕಾರಿ ಮತ್ತು ಪ್ಲಾಯಿಂಗ್ ಸ್ಕ್ವಾಡ್ ತಂಡದೊಂದಿಗೆ ಭೇಟಿ ನೀಡಿದ ಅವರು, ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಗರದ ಎಪಿಎಂಸಿಯಿಂದ ಆರಂಭಿಸಿ ಮತಕ್ಷೇತ್ರ ವ್ಯಾಪ್ತಿಯ ವಿವಿಧ 82 ಗೋದಾಮುಗಳ ಪರಿಶೀಲನೆ ನಡೆಸಿದ ಅವರು, ಚುನಾವಣಾ ಸಂದರ್ಭದಲ್ಲಿ ಅಕ್ರಮವಾಗಿ ವಿವಿಧ ವಸ್ತುಗಳ ಹಂಚಿಕೆ ಸಲುವಾಗಿ ಗೋದಾಮುಗಳ ಬಳಕೆ ಸಂಭವ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲ ಗೋದಾಮುಗಳ ಪರಿಶೀಲನೆ ನಡೆಸಲಾಗುತ್ತಿದ್ದು, ತಮ್ಮ ಗೋದಾಮಿನಲ್ಲಿ ಯಾವುದೇ ಅಕ್ರಮ ವಸ್ತು ದಾಸ್ತಾನು, ಶೇಖರಣೆ ಮಾಡದಂತೆ ಎಚ್ಚರಿಸಿದ ಅವರು, ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಗೋದಾಮಿನ ಮಾಲೀಕರ ಮೇಲೆ ಕಾನೂನು ಕ್ರಮ ವಹಿಸಿ ಎಫ್.ಐ.ಆರ್. ದಾಖಲಿಸಲಾಗುವುದು. ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಹೇಳಿದರು.
ಈ ಕಾರ್ಯದಲ್ಲಿ 19 ಸೆಕ್ಟರ್ ಅಧಿಕಾರಿಗಳು, 6 ತಂಡದ 12 ಫ್ಲಾಯಿಂಗ್ ಸ್ಕ್ವಾಡ್ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.