ವಿಧಾನಸಭಾ ಚುನಾವಣೆ: ಜಿಲ್ಲಾಧಿಕಾರಿಯಿಂದ ಸಿದ್ದತಾ ಪರಿಶೀಲನೆ

ಚಾಮರಾಜನಗರ, ಏ.21:- ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಜಿಲ್ಲೆಯಲ್ಲಿ ಕೈಗೊಂಡಿರುವ ಸಿದ್ದತಾ ಕಾರ್ಯಗಳನ್ನು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಇಂದು ವ್ಯಾಪಕವಾಗಿ ಪರಿಶೀಲಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ವಿಧಾನಸಭಾ ಸಾರ್ವತ್ರಿಕ ಚುನಾವಣೆ ಕಾರ್ಯಕ್ಕಾಗಿ ನಿಯೋಜಿತರಾಗಿರುವ ನೋಡಲ್ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿಯವರು ಪ್ರತೀ ನೋಡಲ್ ಅಧಿಕಾರಿಗಳಿಗೆ ನಿಗದಿ ಮಾಡಿರುವ ಚುನಾವಣಾ ಕೆಲಸದ ಸಿದ್ದತೆಗಳ ಕುರಿತು ವಿವರವಾಗಿ ಪರಾಮರ್ಶೆ ನಡೆಸಿದರು.
ಮತದಾನದಂದು ಮತಗಟ್ಟೆಗೆ ಅವಶ್ಯವಿರುವ ಸಾಮಾಗ್ರಿಗಳು ಈಗಾಗಲೇ ಪೂರೈಕೆಯಾಗಿದೆ. ಈ ಸಾಮಗ್ರಿಗಳು ಎಲ್ಲಾ ಚುನಾವಣಾ ಅಧಿಕಾರಿಗಳಿಗೆ ಅಗತ್ಯವಿರುವ ಸಂಖ್ಯೆಯಲ್ಲಿ ತಲುಪಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಇನ್ನೂ ಯಾವುದಾರು ಸಾಮಾಗ್ರಿಗಳು ನೀಡಬೇಕಿದ್ದಲ್ಲಿ ಕೂಡಲೇ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಯವರು ಸೂಚಿಸಿದರು.
ಮತದಾನಕ್ಕೆ ಅವಶ್ಯ ಬೀಳಬಹುದಾದ ವಾಹನಗಳ ಸಂಖ್ಯೆಯನ್ನು ಈಗಾಗಲೇ ನಿಗದಿಪಡಿಸಿಕೊಳ್ಳಲಾಗಿದೆ. ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ಮಿನಿ ಬಸ್ಸುಗಳು ಹಾಗೂ ಲಘು ವಾಹನಗಳನ್ನು ಅಗತ್ಯಕ್ಕೆ ಅನುಗುಣವಾಗಿ ಸಿದ್ದವಾಗಿಟ್ಟುಕೊಳ್ಳಬೇಕು. ಯಾವುದೇ ಕೊರತೆ ಬಾರದ ಹಾಗೆ ಸಾಕಷ್ಟು ಮೊದಲೇ ವಾಹನಗಳ ಏರ್ಪಾಡಿಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದರು.
ಮತಗಟ್ಟೆಗೆ ನೇಮಕವಾಗಿರುವ ಪಿ.ಆರ್.ಒ, ಎಪಿ.ಆರ್.ಒ ಗಳಿಗೆ ಮತ್ತೊಂದು ಸುತ್ತಿನ ತರಬೇತಿ ಕಾರ್ಯಕ್ಕೆ ಸಿದ್ದತೆ ಮಾಡಿಕೊಳ್ಳಬೇಕು. ಈಗಾಗಲೇ ನೇಮಕವಾಗಿರುವ ಅಧಿಕಾರಿ ಸಿಬ್ಬಂದಿ ಸಂಖ್ಯೆ ಕ್ರೂಢೀಕರಿಸಿಕೊಂಡಿರಬೇಕು. ಮತ ಎಣಿಕೆ ಕಾರ್ಯಕ್ಕೂ ಅಗತ್ಯವಿರುವ ಅಧಿಕಾರಿ ಸಿಬ್ಬಂದಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.
ಮತಗಟ್ಟೆಗಳಲ್ಲಿ ಕಲ್ಪಿಸಲಾಗುತ್ತಿರುವ ಸೌಕರ್ಯಗಳು, ವಿಶೇಷ ಚೇತನರಿಗೆ ಒದಗಿಸಬೇಕಿರುವ ವೀಲ್‍ಚೇರ್, ಆರೋಗ್ಯ ಸಿಬ್ಬಂದಿ ನೇಮಕ, ಕಾಡಂಚಿನ ಪ್ರದೇಶಗಳಲ್ಲಿ ಮತದಾನದಂದು ಪೊಲೀಸ್, ಅರಣ್ಯ ಇಲಾಖೆ ವಹಿಸಬೇಕಿರುವ ಮುಂಜಾಗ್ರತಾ ಕ್ರಮಗಳಿಗೆ ವಿಶೇಷ ಗಮನ ನೀಡುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ, ಜಿಲ್ಲಾ ವೆಚ್ಚ ನೋಡಲ್ ಅಧಿಕಾರಿ ಬಸವರಾಜು, ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಾಣಾಧಿಕಾರಿ ಶ್ರೀನಿವಾಸ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಸುಧಾಮಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಚುನಾವಣಾ ತಹಶೀಲ್ದಾರ್ ರವಿಕುಮಾರ್ ವಸ್ತ್ರದ್, ನೋಡಲ್ ಅಧಿಕಾರಿಗಳಾಗಿರುವ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಭೆಯಲ್ಲಿ ಹಾಜರಿದ್ದರು.