ವಿಧಾನಸಭಾ ಚುನಾವಣೆ: ಕೆ.ಆರ್.ಎಸ್ ಪಕ್ಷ ಪ್ರಣಾಳಿಕೆ ಬಿಡುಗಡೆ

ರಾಯಚೂರು,ಮಾ.೧೭- ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಯಾವೆಲ್ಲಾ ಯೋಜನೆಗಳನ್ನು ರೂಪಿಸಬೇಕು.ಪ್ರಸ್ತುತ ಯಾವ ಕಾರ್ಯಕ್ರಮ ಅನುಷ್ಠಾನಕ್ಕೆ ತರಬೇಕೆನ್ನುವ ನಿಟ್ಟಿನಲ್ಲಿ ಜನಸಾಮಾನ್ಯರ, ತಜ್ಞರ ಜತೆಗೆ ಹಲವಾರು ಸಭೆ,ಸಂವಾದಗಳನ್ನು ನಡೆಸುವ ಮೂಲಕ ಸಮಾಲೋಚಿಸಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್ ಎಸ್) ಪಕ್ಷವು ಪ್ರಣಾಳಿಕೆ ಸಿದ್ಧಪಡಿಸಿದೆ ಎಂದು ಸಿಂಧನೂರು ಕ್ಷೇತ್ರದ ಅಭ್ಯರ್ಥಿ ನಿರುಪಾದಿ ಗೋಮರ್ಸಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಗೆ ಸಿಂಧನೂರು ಕ್ಷೇತ್ರದಿಂದ ನಿರುಪಾದಿ,ಮಾನ್ವಿ ಕ್ಷೇತ್ರದಿಂದ ಗಂಗಾ,ಲಿಂಗಸೂಗೂರು ದಿಂದ ವಿನಯಕುಮಾರ ಅವರು ಪಕ್ಷದ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ ಹಿನ್ನುಳಿದ ಕ್ಷೇತ್ರಗಳಲ್ಲಿ ಆದಷ್ಟು ಬೇಗನೆ ಅಭ್ಯರ್ಥಿಗಳ ಘೋಷಣೆ ಮಾಡಲಿದ್ದಾರೆ ಎಂದರು.
ರಾಜ್ಯ ಸರ್ಕಾರದಲ್ಲಿ ಪ್ರಸ್ತುತ ಖಾಲಿ ಇರುವ ೩ ಲಕ್ಷಕ್ಕಿಂತ ಹೆಚ್ಚು ಹುದ್ದೆಗಳನ್ನು ಒಂದು ವರ್ಷದೊಳಗೆ ಭರ್ತಿ ಮಾಡಲಾಗುತ್ತದೆ.ಭ್ರಷ್ಟಾಚಾರ ರಹಿತ, ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತಕ್ಕಾಗಿ ಮತ್ತು ಲಂಚ ಭ್ರಷ್ಟಾಚಾರ ನಿಗ್ರಹಕ್ಕಾಗಿ ಲೋಕಾಯುಕ್ತ ಬಲಪಡಿಸಲಾಗುತ್ತದೆ. ರಾಜ್ಯದಲ್ಲಿ ಬಡತನ ನಿವಾರಣೆಗಾಗಿ ಸಂಪೂರ್ಣ ಮದ್ಯೆ ನಿಷೇಧ. ಶಿಕ್ಷಣದ ಪ್ರತಿ ಹಂತದಲ್ಲಿಯೂ ಉಚಿತ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕನಿಷ್ಠ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಮತ್ತು ತಾಲ್ಲೂಕಿ ಗೊಂದು ಸರ್ಕಾರಿ ಮಲ್ಟಿ ಸ್ಪೆಷಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ರಾಜ್ಯದ್ಯಂತ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಏರಿಸಲು ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದ ಪ್ರತಿಕೆರೆ ಮತ್ತು ಬಂಜರು ಭೂಮಿಗಳಲ್ಲಿ ಗ್ರಾಮ ಪಂಚಾಯಿತಿ ಮಾಲೀಕತ್ವದಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪನೆ ಮಾಡಿ ಸ್ಥಳೀಯವಾಗಿ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗಂಗಾ, ವಿಜಯ ಕುಮಾರ, ಚನ್ನಬಸವ, ಪಂಪಣ್ಣ, ರಾಘವೇಂದ್ರ ಕಲ್ಲೂರು ಸೇರಿದಂತೆ ಇತರರು ಇದ್ದರು.