ವಿಧಾನಸಭಾ ಚುನಾವಣೆ ಅಧಿಸೂಚನೆ ಬಾಕಿ.
 ಕೂಡ್ಲಿಗಿ ಕ್ಷೇತ್ರದಲ್ಲಿ ಪೂರ್ವಾಪರ ತಯಾರಿ, ಬಿಗಿಭಧ್ರತೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಮಾ.25 :-ರಾಜ್ಯದಲ್ಲಿ   ವಿಧಾನಸಭೆ ಚುನಾವಣೆಗೆ  ಅಧಿಸೂಚನೆಯೊಂದೇ ಬಾಕಿ ಉಳಿದಿದ್ದು  ನೂತನ ವಿಜಯನಗರ ಜಿಲ್ಲೆಯ ಮೊದಲ ಚುನಾವಣೆ ಇದಾಗಿದ್ದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಕ್ಷೇತ್ರದಲ್ಲಿ ಪೂರ್ವಾಪರ ತಯಾರಿ ನಡೆಸಲಾಗಿದ್ದು ಜಿಲ್ಲೆಯ ವ್ಯಾಪ್ತಿಯ ಕೂಡ್ಲಿಗಿ ಕ್ಷೇತ್ರದಲ್ಲಿ ಚುನಾವಣಾಧಿಕಾರಿಗಳ ನೇಮಕ ಮಾಡಲಾಗಿದ್ದು ಅವರ ಅಧ್ಯಕ್ಷತೆಯಲ್ಲಿ ಈಗಾಗಲೇ ಚುನಾವಣೆಯ ಸಕಲ ಸಿದ್ಧತೆ ಮತಗಟ್ಟೆ ವೀಕ್ಷಣೆ ಚೆಕ್ ಪೋಸ್ಟ್ ನಿರ್ಮಾಣ ನಿರ್ವಹಣೆ ಬಿಗಿಬಂದೋಬಸ್ತ್ ತರಬೇತಿ ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಬಹುದಾಗಿದೆ.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ 245ಮತಗಟ್ಟೆಗಳಿದ್ದು, ಪಟ್ಟಣದಲ್ಲಿ 26ಮತಗಟ್ಟೆಗಳು, ಗ್ರಾಮೀಣ ಭಾಗದಲ್ಲಿ 219 ಮತಗಟ್ಟೆಗಳಿವೆ ಅದರಲ್ಲಿ 56ಮತಗಟ್ಟೆಗಳು ಕ್ರಿಟಿಕಲ್ ಮತಗಟ್ಟೆಗಳಾಗಿವೆ.
ಈಗಿನವರೆಗೆ ಕೂಡ್ಲಿಗಿ ಕ್ಷೇತ್ರದಲ್ಲಿ 1, 02,554 ಪುರುಷರು, 99,463ಮಹಿಳೆಯರು ಹಾಗೂ ಇತರೆ 14ಮತದಾರರು ಸೇರಿ 2,02,031ಮತದಾರರಿದ್ದಾರೆ ಚುನಾವಣೆ ಮತಪಟ್ಟಿಯಲ್ಲಿ ಸೇರ್ಪಡೆಯಾಗುವ 18ವರ್ಷದ ಯುವಕರಿಗೆ ಅವಕಾಶವಿದ್ದು ಯಾವುದೇ ಮತದಾರರನ್ನು ಮತದಾನ ವಂಚಿತರಾಗದಂತೆ ಚುನಾವಣಾ ಆಯೋಗ ಮತದಾರರ ಪಟ್ಟಿ ಸೇರ್ಪಡೆಗೆ ಕೊನೆಹಂತದವರೆಗೂ ಅವಕಾಶ ನೀಡುತ್ತಿದ್ದು ಇದರಂತೆ ಕೊನೆಹಂತದಲ್ಲಿ ಮತದಾರರ ಅಂಕೆಸಂಖ್ಯೆ ಹೆಚ್ಚಾಗಲಿದೆ ಎಂದು ಹೇಳಬಹುದಾಗಿದೆ.
30ಗ್ರಾಮಪಂಚಾಯಿತಿಗಳು, 1ಪಟ್ಟಣಪಂಚಾಯತಿ ಹೊಂದಿರುವ ನಾಲ್ಕು ಹೋಬಳಿಗಳನ್ನು ಹೊಂದಿರುವ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ 22ಸೆಕ್ಟರ್ ಅಧಿಕಾರಿಗಳು, 3ಎಫ್ ಎಸ್ ಟಿ ಹಾಗೂ 3 ವಿ ಎಸ್ ಟಿ ತಂಡಗಳ ರಚನೆ ಮಾಡಿ 8ಚೆಕ್ ಪೋಸ್ಟ್ ಗಳನ್ನು ತೆರೆದು ಚುನಾವಣಾ ಸಿದ್ದತಾ ತಯಾರಿ ಮಾಡಿಕೊಂಡು ತಾಲೂಕು ಮಟ್ಟದಲ್ಲಿ ತರಬೇತಿ, ಸಭೆ ನಡೆಸಿ ಶಾಂತಿಯುತ ಮತದಾನಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಪೂರ್ವಾಪರ ತಯಾರಿ ಕ್ಷೇತ್ರದಲ್ಲಿ ಸಿದ್ಧವಾಗಿದೆ.
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಪೊಲೀಸ್ ಬಿಗಿ ಬಂದೋಬಸ್ತ್ ಗೆ ಸಂಬಂಧಿಸಿದಂತೆ ಕೂಡ್ಲಿಗಿ ಸಿಪಿಐ ನೋಡಲ್ ಅಧಿಕಾರಿಯಾಗಿದ್ದು 8ಚೆಕ್ ಪೋಸ್ಟ್ ಗಳಲ್ಲಿ ಯಾವುದೇ ಮತದಾರರಿಗೆ ಆಮಿಷ ಒಡ್ಡುವ ಪರವಾನಿಗೆ ಇಲ್ಲದ ಹಣ, ಸಾಮಗ್ರಿಗಳು ಒಳಬಾರದಂತೆ ಬಿಗಿ ತಪಾಸಣೆ ಚೆಕ್ ಪೋಸ್ಟ್ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ ಅಲ್ಲದೆ ಹೊಸಹಳ್ಳಿ ಚೆಕ್ ಪೋಸ್ಟ್ ತೆರೆದ ದಿನವೇ ಪರವಾನಿಗೆ ಇಲ್ಲದ 17ಲಕ್ಷ ರೂ ಹಣ ವಶಕ್ಕೆ ಪಡೆದು ರಾಜ್ಯದ ಗಮನ ಸೆಳೆದು ಇಲ್ಲಿನ ಚುನಾವಣಾ ಬಿಗಿಯನ್ನು ತೋರಿಸಿದೆ.
ಕೂಡ್ಲಿಗಿ ವಿಧಾನಸಭಾ ಚುನಾವಣಾಧಿಕಾರಿಗಳಾಗಿ ಹೊಸಪೇಟೆ ನಗರಾಭಿವೃದ್ಧಿ ಆಯುಕ್ತ ಈರಣ್ಣ ಬಿರಾದಾರ್ ನೇಮಕವಾಗಿದ್ದು ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಮಾಹಿತಿ ಪಡೆದು ಮತಗಟ್ಟೆಗಳ ವೀಕ್ಷಣೆ, ಚುನಾವಣೆಗೆ ಸಂಬಂದಿಸಿದ  ಸಿಬ್ಬಂದಿಗಳ ಸಭೆ ನಡೆಸುತ್ತಿದೆ ಒಟ್ಟಿನಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಪೂರ್ವಾಪರ ತಯಾರಿ ಮಾಡಿಕೊಂಡಿದೆ ಎಂದು ಹೇಳಬಹುದಾಗಿದೆ.