ವಿಧಾನಸಭಾ ಚುನಾವಣೆ: ಅಕ್ರಮ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ

ಚಾಮರಾಜನಗರ, ಮೇ.06:- ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಸಮೀಪಿಸುತ್ತಿದ್ದು ಜಿಲ್ಲೆಯಲ್ಲಿ ಮತ್ತಷ್ಟುಕಟ್ಟೆಚ್ಚರ ವಹಿಸಿ ಅಕ್ರಮಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮಜರುಗಿಸುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಗೂಗಲ್ ಮೀಟ್ ಮೂಲಕ ವಿಧಾನಸಭಾಕ್ಷೇತ್ರವಾರು ಚುನಾವಣಾಧಿಕಾರಿಗಳು, ಫ್ಲೈಯಿಂಗ ಸ್ಕ್ವಾಡ್ ಹಾಗೂ ಚುನಾವಣಾ ಸಂಬ್ಬಂದಿ ನಿಯೋಜಿತರಾಗಿರುವ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಜಿಲ್ಲಾದ್ಯಂತ ಇನ್ನಷ್ಟು ಚುರುಕಾಗಿ ತಪಾಸಣಾ ಕಾರ್ಯವನ್ನು ಮಾಡಬೇಕು. ನಗರ, ಗ್ರಾಮೀಣ ಪ್ರದೇಶಗಳಲ್ಲಿ ಚುನಾವಣಾ ಹಿನ್ನೆಲೆಯಲ್ಲಿ ವ್ಯಾಪಕವಾಗಿ ಕಣ್ಗಾವಲು ಇರಬೇಕು. ವಿವಿಧ ಕಡೆನಡೆಯಬಹುದಾದ ಚಟುವಟಿಕೆಗಳ ಮೇಲೆ ನಿಗಾ ಇಡಬೇಕು. ಅನುಮಾನಸ್ಪದವಾಗಿ ಕಂಡು ಬರುವ ವಾಹನಗಳನ್ನು ತಪಾಸಣೆ ಮಾಡಬೇಕು. ಆಮಿಷ ವಸ್ತುಗಳು ಒಡ್ಡುವ ವಸ್ತುಗಳು ಇನ್ನಿತರ ಯಾವುದೇ ಸಾಮಾಗ್ರಿಗಳು ಸಾಗಾಣೆಯಾಗುತ್ತಿದೇಯೆ ಎಂದು ಪರಿಶೀಲಿಸಬೇಕು. ಅಕ್ರಮ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಿ ಎಂದರು.
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಎಲ್ಲಿಯೇ ಕಂಡು ಬಂದರೂ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಎಲ್ಲ ತಂಡಗಳು ಮತ್ತಷ್ಟು ಸಕ್ರಿಯಗೊಂಡು ಮುಕ್ತ ಪಾರದರ್ಶಕ ಚುನಾವಣೆಗೆ ಪೂರಕವಾಗಿರುವ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿಯವರು ಸೂಚಿಸಿದರು.
ಮತದಾನದ ಪೂರ್ವ ಹಾಗೂ ಮತದಾನಕ್ಕೆ ಕೈಗೊಂಡಿರುವ ಸಿದ್ದತೆಗಳನ್ನು ಪರಿಶೀಲಸಿದ ಜಿಲ್ಲಾಧಿಕಾರಿಯವರು ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಿದ್ಯುತ್, ಸ್ವಚ್ಚತೆ ಬಗ್ಗೆ ವಿಶೇಷ ಗಮನವಿರಬೇಕು. ಮತ್ತೊಮ್ಮೆ ಎಲ್ಲವನ್ನು ಪರಿಶೀಲಿಸಿಕೊಳ್ಳಬೇಕು. ಮತಗಟ್ಟೆಗಳಲ್ಲಿ ಅಗತ್ಯವಿರುವ ಪೀಠೋಪಕರಣಗಳನ್ನು ಸಿದ್ದವಾಗಿಟ್ಟುಕೊಳ್ಳಬೇಕು ಎಂದರು.
ಮತಗಟ್ಟೆಗಳಿಗೆ ತೆರಳುವ ಅಧಿಕಾರಿ ಸಿಬ್ಬಂದಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಕಾಡಂಚಿನ ಕುಗ್ರಾಮ ಪ್ರದೇಶಗಳಿಗೂ ಅಗತ್ಯ ವಾಹನಗಳನ್ನು ನಿಯೋಜಿಸಲಾಗಿದೆ. ಊಟ ಉಪಹಾರ, ಕುಡಿಯುವ ನೀರು ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಎಲ್ಲಿಯೂ ಲೋಪಗಳಿಗೆ ಅವಕಾಶವಾಗದಂತೆ ನಿಯೋಜಿತ ಕರ್ತವ್ಯವನ್ನು ಪೂರೈಸಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ ಅವರು ಮಾತನಾಡಿ ಮತದಾನ ಪೂರ್ವ ಹಾಗೂ ಮತಗಟ್ಟೆಗಳಲ್ಲಿ ಅಗತ್ಯವಿರುವ ಸೌಲಭ್ಯಗಳ ಬಗ್ಗೆ ಮತ್ತೊಮ್ಮೆ ಖಾತರಿಪಡಿಸಿಕೊಳ್ಳಬೇಕು. ಚುನಾವಣಾ ಕೆಲಸವನ್ನು ಗಂಭೀರವಾಗಿ ತೆಗೆದುಕೊಂಡು ಯಾವುದೇ ಕರ್ತವ್ಯ ಲೋಪಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳಾದ ತಹಶೀಲ್ದಾರರು, ಫ್ಲೈಯಿಂಗ ಸ್ಕ್ವಾಡ್ ತಂಡ, ಇತರೆ ಅಧಿಕಾರಿಗಳು ಇದ್ದರು. ಸಭೆಗೂ ಮೊದಲು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಬೇಡರಪುರದಲ್ಲಿರುವ ಮತ ಎಣಿಕೆ ಕೇಂದ್ರವಾದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಭೇಟಿ ನೀಡಿ ಸಿದ್ದತೆಗಳನ್ನು ಪರಿಶೀಲಿಸಿದರು.