ವಿಧಾನಸಭಾ ಕ್ಷೇತ್ರದಲ್ಲಿ ದಲಿತರಿಗೆ ಕಾಂಗ್ರೆಸ್ ಟಿಕೆಟ್‌ಗೆ ಕಾಕರಗಲ್ ಆಗ್ರಹ

ಲಿಂಗಸುಗೂರು,ಜ.೦೪- ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯದಡಿ ಅಸ್ಪೃಶ್ಯ ದಲಿತರಿಗೆ ಟಿಕೆಟ್ ನೀಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹನುಮಂತಪ್ಪ ಕಾಕರಗಲ್ ಆಗ್ರಹಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಅಸ್ಪೃಶ್ಯ ದಲಿತರಿಗೆ ಕಾಂಗ್ರೆಸ್ ಟಿಕೆಟ್ ನೀಡಿದರೆ ಗೆಲ್ಲುವುದಿಲ್ಲ ಎಂಬ ವಾದ ಸರಿಯಾದದಲ್ಲ. ಈ ಹಿಂದೆ ದೇವದುರ್ಗ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾದ ಸಂದರ್ಭದಲ್ಲಿ ಅಸ್ಪೃಶ್ಯ ದಲಿತರೇ ಜಯಬೇರಿ ಭಾರಿಸಿದ್ದಾರೆ. ಲಿಂಗಸುಗೂರಲ್ಲಿ ಅಸ್ಪೃಶ್ಯ ದಲಿತರು ಅನ್ಯ ಸಮುದಾಯಗಳೊಂದಿಗೆ ಸಹೋದರ ಭಾವನೆ ಹೊಂದಿದ್ದಾರೆ. ಇದರಿಂದ ಟಿಕೆಟ್ ನೀಡಿದರೆ ಗೆಲುವು ಪಕ್ಕಾ ಎಂದದು ನುಡಿದರು.
೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಲಿಂಗಸುಗೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಅಸ್ಪೃಶ್ಯ ದಲಿತರಿಗೆ ದೊರಕಿಸಿಕೊಡಲು ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಬೆಂಬಲ ನೀಡಬೇಕು ಇಲ್ಲದೇ ಹೋದರೆ ಕುಷ್ಟಗಿಯಲ್ಲಿ ಅಸ್ಪೃಶ್ಯ ದಲಿತರು ಅನ್ಯ ರಾಜಕೀಯ ಪಕ್ಷಗಳಿಗೆ ಬೆಂಬಲಿಸುವುದು ಅನಿವಾರ್‍ಯ. ಅಲ್ಲದೇ ರಾಯಚೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಮುಸ್ಲಿಂ ಸಮುದಾಯಕ್ಕೆ ನೀಡಬೇಕು ಇಲ್ಲದೇ ಹೋದರೆ ದಲಿತ, ಮುಸ್ಲಿಮರು ಒಂದಾಗಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಪಕ್ಷದ ಸಿದ್ದಾಂತ, ತತ್ವಾಚರಣೆ, ಸಂಪ್ರದಾಯ, ಸಂಸ್ಕೃತಿ ಅಸ್ಪೃಶ್ಯ ದಲಿತರಿಗೆ ಒಗ್ಗುವಂತಹದ್ದಾಗಿದೆ. ಕಾಂಗ್ರೆಸ್ ಪಕ್ಷದ ಮೇಲೆ ಅಸ್ಪೃಶ್ಯ ದಲಿತರಿಗೆ ಸಹಜ ಪ್ರೀತಿ ಇದೆ. ಅಸ್ಪೃಶ್ಯ ದಲಿತರ ಭಾವನೆ ತಕ್ಕಂತೆ ಲಿಂಗಸುಗೂರು ವಿಧಾನಸಭಾ ಕ್ಷೇತ್ರದಲ್ಲಿ ನ್ಯಾಯ ಸಿಕ್ಕಿಲ್ಲ. ಆದ್ದರಿಂದ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡುವ ಮೂಲಕ ಅಧಿಕಾರದಿಂದ ದೂರ ತಳ್ಪಟ್ಟ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ಹನುಮಂತ ಮನ್ನಾಪುರ, ಶಿವಪ್ಪ ಪಲಕನಮರಡಿ, ತಿರುಮಂದೆಪ್ಪ ಕಟ್ಟಿಮನಿ, ಖಾಶಿಮಪ್ಪ ಡಿ. ಮುರಾರಿ, ಹುಲ್ಲೇಶ ಸೇರಿದಂತೆ ಇದ್ದರು.