(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಜು. ೫- ವಿಧಾನಸಭೆಯ ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ ಆಯ್ಕೆಯಾಗುವ ಸಾಧ್ಯತೆಗಳಿವೆ.
ವಿಧಾನಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದ್ದು, ಈ ಸ್ಥಾನಕ್ಕೆ ಕಾಂಗ್ರೆಸ್‌ನ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.ವಿಧಾನಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಹಾವೇರಿಯ ಶಾಸಕ ರುದ್ರಪ್ಪ ಲಮಾಣಿ ಅವರು ಇಂದು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಲಿದ್ದು, ಅವರ ಆಯ್ಕೆ ಬಹುತೇಕ ಅವಿರೋಧವಾಗುವ ಸಾಧ್ಯತೆಗಳಿವೆ.ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ಕೊನೆಘಳಿಗೆಯಲ್ಲಿ ಕೈ ತಪ್ಪಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಉಪಾಧ್ಯಕ್ಷ ಸ್ಥಾನ ನೀಡಲು ಕಾಂಗ್ರೆಸ್ ತೀರ್ಮಾನಿಸಿದೆ. ಅದರಂತೆ ರುದ್ಪಪ್ಪ ಲಮಾಣಿ ಅವರನ್ನು ವಿಧಾನಸಭೆಯ ಉಪಾಧ್ಯಕ್ಷರಾಗುವುದು ಬಹುತೇಕ ನಿಶ್ಚಿತ.
ವಿಧಾನಸಭೆಯ ಉಪಾಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಪುಟ್ಟರಂಗಶೆಟ್ಟಿ ಅವರನ್ನು ಪಕ್ಷ ಆಯ್ಕೆ ಮಾಡುತ್ತದೆ ಎಂದು ಹೇಳಲಾಗಿತ್ತಾದರೂ ಅಚ್ಚರಿ ಅಭ್ಯರ್ಥಿ ಎಂಬಂತೆ ರುದ್ರಪ್ಪ ಲಮಾಣಿ ಅವರನ್ನು ಆಯ್ಕೆ ಮಾಡಲಾಗಿದೆ.ಈ ಹಿಂದೆ ಸಚಿವ ಸ್ಥಾನ ಕೈ ತಪ್ಪಿದಕ್ಕೆ ಮಾಜಿ ಶಾಸಕ ಪುಟ್ಟರಂಗಶೆಟ್ಟಿ ಅವರಿಗೆ ವಿಧಾನಸಭೆಯ ಉಪಾಧ್ಯಕ್ಷ ಸ್ಥಾನ ನೀಡಲು ಕಾಂಗ್ರೆಸ್ ಹೈಕಮಾಡ್ ನಿರ್ಧಾರ ಮಾಡಿತ್ತು. ಆದರೆ ಆರಂಭದಲ್ಲಿ ವಿಧಾನಸಭಾ ಉಪಾಧ್ಯಕ್ಷ ಸ್ಥಾನ ತಮಗೆ ಬೇಡ ಸಚಿವ ಸ್ಥಾನವೇ ಬೇಕು ಎಂದು ಪುಟ್ಟರಂಗಶೆಟ್ಟಿ ಹೇಳಿದ್ದರು. ಇದು ವಿಧಾನಸಭಾಧ್ಯಕ್ಷ ಸ್ಥಾನ ಪುಟ್ಟರಂಗಶೆಟ್ಟಿ ಅವರ ಕೈ ತಪ್ಪಲು ಕಾರಣ ಎನ್ನಲಾಗಿದೆ.ಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದವರಿಗೆ ಪರ್ಯಾಯ ಸ್ಥಾನಗಳನ್ನು ನೀಡಲಾಗುತ್ತಿದ್ದು, ಈಗಾಗಲೇ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರನ್ನು ದೆಹಲಿ ವಿಶೇಷ ಪ್ರತಿನಿಧಿಯಾಗಿ, ಶಾಸಕ ಅಶೋಕ್ ಪಟ್ಟಣ್ ಅವರನ್ನು ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕರಾಗಿ, ಸಲೀಂ ಅಹಮದ್ ಅವರನ್ನು ವಿಧಾನಪರಿಷತ್‌ನ ಸರ್ಕಾರದ ಮುಖ್ಯ ಸಚೇತಕರನ್ನಾಗಿ ಆಯ್ಕೆ ಮಾಡಲಾಗಿದೆ.