ವಿಧಾನಮಂಡಲ ಅಧಿವೇಶನಕ್ಕೆ ಆಗ್ರಹ ರೈತರ ತಮಟೆ ಚಳವಳಿ

ಬೆಂಗಳೂರು, ಅ.೧೨-ಕಾವೇರಿ ನೀರು ನಿಲ್ಲಿಸುವಂತೆ ವಿಧಾನಮಂಡಲ ಅಧಿವೇಶನ ಕರೆಯುವಂತೆ ಒತ್ತಾಯಿಸಿ ರೈತ ನಾಯಕರ ಚಳುವಳಿ ೧೨ ದಿನಕ್ಕೆ ಕಾಲಿಟ್ಟಿದ್ದು, ಇಂದು ತಮಟೆ ಹೋರಾಟ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ನಗರದಲ್ಲಿಂದು ಸ್ವಾತಂತ್ರ್ಯ ಉದ್ಯಾನವನ ಮೈದಾನದಲ್ಲಿ ಜಮಾಯಿಸಿದ ರೈತರ ನಾಯಕರು, ಹೋರಾಟಗಾರರು, ಕಾವೇರಿ ನೀರು ಈ ಕೂಡಲೇ ನಿಲ್ಲಿಸಿ ಜನರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಹೋರಾಟವನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಸಂಚಾಲಕ ಕುರುಬೂರ್ ಶಾಂತಕುಮಾರ್, ತಮಿಳುನಾಡಿಗೆ ಮತ್ತೆ ಮುಂದಿನ ೧೫ ದಿನಗಳ ಕಾಲ ನಿತ್ಯ ೩೦೦೦ ಕ್ಯೂಸೆಕ್ ನೀರು ಹರಿಸಲು ಕಾವೇರಿ ಜಲ ನಿಯಂತ್ರಣ ಸಮಿತಿ ರಾಜ್ಯಕ್ಕೆ ಆದೇಶ ನೀಡಿರುವ ರಾಜ್ಯದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮಳೆಯ ಕೊರತೆಯಿಂದ ಜಲಾಶಯಗಳೆಲ್ಲ ಖಾಲಿ ಆಗಿದ್ದರೂ ಕರ್ನಾಟಕಕ್ಕೆ ಬರೆಯ ಮೇಲೆ ಬರೆ ಎಳೆಯಲಾಗುತ್ತದೆ. ಕಾವೇರಿ ಜಲ ನಿಯಂತ್ರಣ ಸಮಿತಿ ಮುಂದಿನ ೧೫ ದಿನಗಳ ಕಾಲ ನಿತ್ಯ ೩,೦೦೦ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಮತ್ತೆ ಆದೇಶ ನೀಡಿರುವುದು ರಾಜ್ಯಕ್ಕೆ ದೊಡ್ಡ ಆಘಾತ. ಇಂಥ ಜಲಾಘಾತಗಳನ್ನು ಕೊಡುವುದಕ್ಕೇ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿಗಳನ್ನು ರಚನೆ ಮಾಡಿಕೊಂಡಿದ್ದಾರೆಯೇ ಎನ್ನುವ ಅನುಮಾನ ಮೂಡಿಸುತ್ತಿದೆ ಎಂದರು.
ಈ ಆದೇಶಗಳು ಸಂವಿಧಾನ ಹಾಗೂ ಒಕ್ಕೂಟದ ಆಶಯಗಳಿಗೆ ವಿರುದ್ಧವಾಗಿವೆ. ಮಾತ್ರವಲ್ಲ, ಕನ್ನಡಿಗರ ತಾಳ್ಮೆ, ಸಹನೆ ಪರೀಕ್ಷೆ ಮಾಡುವಂತಿವೆ. ಈ ಆದೇಶ ಕರ್ನಾಟಕದ ಹಿತಾಸಕ್ತಿಗೆ ಮರಣಶಾಸನ. ಬೆಂಗಳೂರು ಜನ ಕುಡಿಯುವ ನೀರಿನ ಬಿಕ್ಕಟ್ಟು ಎದುರಿಸುತ್ತಿದ್ದಾರೆ.
ಕಾವೇರಿ ಕೊಳ್ಳದ ರೈತರು ಒಂದು ಬೆಳೆ ಬೆಳೆದಿಲ್ಲ ಸಮರ್ಪಕವಾಗಿ ನೀರು ಹರಿದಿಲ್ಲ. ಹೀಗಿದ್ದರೂ ರಾಜ್ಯಕ್ಕೆ ಆದೇಶದ ಮೇಲೆ ಆದೇಶ ನೀಡಿ ಸಮಾನ ನ್ಯಾಯ ತತ್ವವನ್ನು ನಾಮಾವಶೇಷ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.