ವಿಧಾನಪರಿಷತ್ ಚುನಾವಣೆ ಹಿನ್ನೆಲೆಃ ವೇಳಾಪಟ್ಟಿ ಪ್ರಕಟ

ವಿಜಯಪುರ, ನ.11-ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಅನರ್ಹ ಮತದಾರರನ್ನು ಹೊರಗಿಟ್ಟು, ಪರಿಷ್ಕøತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಪ್ರಮಾಣೀಕರಿಸಿ ನೀಡಬೇಕೆಂದು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಬಾಗಲಕೋಟೆ ಜಿಲ್ಲೆಯ ಕರಡಿ ಮತಗಟ್ಟೆ ಕೇಂದ್ರವನ್ನು ಹೊರತುಪಡಿಸಿ ಒಟ್ಟು 37 ಮತಗಟ್ಟೆಗಳಿಗೆ ಹೋಬಳಿಗಳಿಗೊಂದರಂತೆ ಸೆಕ್ಟರ್ ಆಫೀಸರ್ ಗಳನ್ನು ನೇಮಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಅದರಂತೆ ಈ ಚುನಾವಣೆಯಲ್ಲಿ ಈವಿಎಂ ಮತಯಂತ್ರಗಳನ್ನು ಬಳಸದೆ ಬ್ಯಾಲೆಟ್ ಪೇಪರ್ ಗಳನ್ನು ಬಳಸಲಾಗುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲೆಗಳ ಐಬಿ ಗಳನ್ನು ಈಗಾಗಲೇ ಜಿಲ್ಲಾಡಳಿತದ ಸುಪರ್ದಿಗೆ ತೆಗೆದುಕೊಳ್ಳಲಾಗುತ್ತಿದ್ದು, ವಾಹನಗಳ ವ್ಯವಸ್ಥೆಯ ಬಗ್ಗೆಯೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಚುನಾವಣೆಯ ಮತ ಎಣಿಕೆ ಕಾರ್ಯ ವಿಜಯಪುರ ನಗರದ ದರ್ಬಾರ ಪ್ರೌಢಶಾಲೆಯಲ್ಲಿ ನಡೆಯಲಿದೆ. ಅದರಂತೆ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯ ಇಲ್ಲಿಯೇ ನಡೆಯಲಿದೆ ಎಂದು ಅವರು ತಿಳಿಸಿದರು.
ಅದರಂತೆ ಚುನಾವಣೆಗೆ ವಿಜಯಪುರ ಜಿಲ್ಲೆಯ ಅಧಿಕಾರಿಗಳನ್ನೇ ನೇಮಿಸಲಾಗಿದ್ದು, ಅವರಿಗೆ ತರಬೇತಿ ನೀಡಿ ಬಾಗಲಕೋಟೆಗೆ ಕಳುಹಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.
ಸಾರ್ವಜನಿಕ ಸಭೆ-ಸಮಾರಂಭ, ಚುನಾವಣಾ ಭಾಷಣದಂತಹ ಇನ್ನಿತರ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಕಾರ್ಯಕ್ರಮಗಳ ಬಗ್ಗೆ ಫ್ಲೈಯಿಂಗ್ ಸ್ಕ್ವಾಡ್ ಸದಾ ಕ್ರಿಯಾಶಾಲವಾಗಿರುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಈ ವಿಧಾನಪರಿಷತ್ ಚುನಾವಣೆಗೆ ನವೆಂಬರ್ 16 ರಂದು ಅಧಿಸೂಚನೆ ಹೊರಡಿಸಲಾಗುತ್ತದೆ ಅದರಂತೆ ನವೆಂಬರ್ 23 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ನವಂಬರ್ 24 ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ.
ನವಂಬರ್ 26 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಡಿಸೆಂಬರ್ 10ರಂದು ಮತದಾನ ನಡೆಯಲಿದೆ. ಅಂದು ಬೆಳಗ್ಗೆ 8ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಡಿಸೆಂಬರ್ 14 ರಂದು ಮತಎಣಿಕೆ ನಡೆಯಲಿದೆ. ಡಿಸೆಂಬರ್ 16ರಂದು ಚುನಾವಣೆ ಮುಕ್ತಾಯಗೊಳ್ಳಲಿದೆ ಎಂದು ಅವರು ತಿಳಿಸಿದರು.
ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ 1 ಮಹಾನಗರಪಾಲಿಕೆ, 5 ನಗರ ಸಭೆಗಳು ಮತ್ತು 10 ಪುರಸಭೆಗಳು, 16 ಪಟ್ಟಣ ಪಂಚಾಯಿತಿಗಳು, 2 ಜಿಲ್ಲಾ ಪಂಚಾಯಿತಿ, 22 ತಾಲೂಕು ಪಂಚಾಯಿತಿಗಳು, 405 ಗ್ರಾಮ ಪಂಚಾಯಿತಿಗಳು ಹೀಗೆ ಒಟ್ಟು ನಾಲ್ಕು 461 ಸ್ಥಳೀಯ ಸಂಸ್ಥೆಗಳಿವೆ.
ಅದರಂತೆ 7689 ಸದಸ್ಯರಿದ್ದು,414 ಸ್ಥಾನಗಳು ಖಾಲಿ ಇವೆ. ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ಅಧಿಕಾರ ಅವಧಿ ಮುಗಿದಿದ್ದು ಸ್ಥಾನಗಳು ಖಾಲಿ ಇರುತ್ತವೆ ಎಂದು ಅವರು ತಿಳಿಸಿದರು.ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟ ಗ್ರಾಮ ಪಂಚಾಯಿತಿಗಳನ್ನು ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿಸುವ ಕಾರ್ಯ ಪ್ರಗತಿಯಲ್ಲಿದೆ.
ಅದೇ ರೀತಿ ಬಾಗಲಕೋಟೆ ಜಿಲ್ಲೆಯ ಶಿರೂರ್ ಮತ್ತು ಲೋಕಾಪುರ ಗ್ರಾಮಪಂಚಾಯಿತಿಗಳನ್ನು ಪಟ್ಟಣ ಪಂಚಾಯ್ತಿಗೆ ಮೇಲ್ದರ್ಜೆಗೇರಿಸುವ ಕಾರ್ಯ ಪ್ರಗತಿಯಲ್ಲಿದೆ. ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಅಧಿಕಾರಿಗಳು ಉಪಸ್ಥಿತರಿದ್ದರು.