ವಿಧವೆಯರು ಕನಿಷ್ಠವಲ್ಲ, ನಿತ್ಯ ಮುತ್ತೈದಿಯರು : ಪ್ರಭುಶ್ರೀ ತಾಯಿ

ಕಲಬುರಗಿ: ಜೂ.23: ವಿಧವಾ ಮಹಿಳೆಯರು ಕನಿಷ್ಠವೆಂದು ಭಾವಿಸಿ ಆಕೆಯನ್ನು ಯಾವುದೇ ಆಚರಣೆ, ಕಾರ್ಯಕ್ರಮ, ಸಮಾರಂಭ, ಶುಭ ಕಾರ್ಯದಿಂದ ದೂರವಿರಿಸುವುದು ತಪ್ಪು. ಸಾಮಾನ್ಯ ಮಹಿಳೆಯರಂತೆ ಆಕೆಗೂ ಬದುಕುವ ಹಕ್ಕಿದೆ. ವಿಧವೆಯರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಸಮಾಜ ವರ್ತಿಸುವುದು ನಿಲ್ಲಿಸಬೇಕು. ವಿಧವೆಯರು ಕನಿಷ್ಠವಲ್ಲ, ನಿತ್ಯ ಮುತ್ತೈದಿಯರಾಗಿದ್ದಾರೆ ಎಂದು ಅಕ್ಕಮಹಾದೇವ ಆಶ್ರಮದ ಪೂಜ್ಯ ಪ್ರಭುಶ್ರೀ ತಾಯಿ ಹೇಳಿದರು.
ನಗರದ ಬಿದ್ದಾಪುರ ಕಾಲನಿಯಲ್ಲಿರು ಆಶ್ರಮದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಸಂಜೆ ಏರ್ಪಡಿಸಲಾಗಿದ್ದ ‘ಅಂತಾರಾಷ್ಟ್ರೀಯ ವಿಧವೆಯರ ದಿನಾಚರಣೆ’ಯನ್ನು ಬಸವೇಶ್ವರರ ಭಾವಚಿತ್ರಕ್ಕೆ ಮೂವರು ವಿಧವೆಯರಿಂದ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟನೆ ಮತ್ತು ವಿಧವೆಯರಿಗೆ ಗೌರವ ಸಮ್ಮಾನ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿದರು.
ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ, ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ವಿಧವೆಯರ ಬಗ್ಗೆ ಕೀಳರಿಮೆ ಸಲ್ಲದು. ಅವರಿಗೆ ನೋವು ನೀಡುವುದು ಅಮಾನವೀಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ. ಬುದ್ಧ-ಬಸವ-ಡಾ.ಅಂಬೇಡ್ಕರ್ ಮಹಿಳೆಯರ ಸಮಾನತೆಗಾಗಿ ಹೋರಾಡಿರುವುದು ಸ್ಮರಣೀಯ. ರಾಜಾರಾಮ ಮೋಹನರಾಯ್ ಅವರು ಸತಿಸಹಗಮನ ಪದ್ದತಿ ನಿಷೇಧಕ್ಕೆ ಶ್ರಮಿಸಿದ್ದು ಮರೆಯುವಂತಿಲ್ಲ. ವಿಧವೆಯರ ಎಂದಿಗೂ ಕೂಡಾ ದೈತಿಗೆಡದೆ ಧೈರ್ಯದಿಂದ ಜೀವನ ಸಾಗಿಸಬೇಕು. ಸರ್ಕಾರ ವಿವಿಧ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ವಿಧವಾ ತಾಯಂದಿರಾದ ಪದ್ಮಾವತಿ ರೆಡ್ಡಿ, ಪುತಳಾಬಾಯಿ ಪೊಲೀಸ್ ಪಾಟೀಲ್ ಮತ್ತು ಶಾರದಾ ಇಂಗಳೆ ಅವರು ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಇವರಿಗೆ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಶಿವಯೋಗಪ್ಪ ಬಿರಾದಾರ, ಪರಮೇಶ್ವರ ಬಿ.ದೇಸಾಯಿ, ಪೀರಪ್ಪ ಝಾಪುರ, ಮಲ್ಲಿಕಾರ್ಜುನ ಝಾಪುರ, ಭಾಗ್ಯಶ್ರೀ ಪಾಟೀಲ, ಲಕ್ಷ್ಮೀ ತಾರಾಪುರ, ವಿಜಯಲಕ್ಷ್ಮೀ ಹೊಟಗಾರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.