ವಿದ್ಯೆ ಬದುಕು ರೂಪಿಸುವ ಮಹಾಶಕ್ತಿ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.24:- ವಿದ್ಯೆ ಎಂಬುದು ವ್ಯಕ್ತಿತ್ವದ ಜತೆಗೆ ಭವಿಷ್ಯದಲ್ಲಿ ಗೌರವಯುತವಾದ ಸುಂದರ ಬದುಕನ್ನು ರೂಪಿಸಿ ಕೊಡುತ್ತದೆಯಾದ್ದರಿಂದ ವಿದ್ಯಾರ್ಥಿಗಳು ಸಂಪೂರ್ಣವಾಗಿ ಶಿಕ್ಷಣವನ್ನು ಕೈವಶ ಮಾಡಿಕೊಳ್ಳಬೇಕೆಂದೂ, ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇದಾವುದೂ ಕಷ್ಟವಲ್ಲವೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ನಗರದ ರಾಮಾನುಜಾ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿ ಬಾಬ ಮಂದಿರದಲ್ಲಿ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಸಂಯುಕ್ತ ಆಶ್ರಯದಲ್ಲಿ ಪ್ರಸ್ತುತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಸ್ಥಾನಗಳಿಸಿರುವ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರಾಥಮಿಕ ಶಿಕ್ಷಣದಿಂದ ಪ್ರಾರಂಭಿಸಿ ಉನ್ನತ ಶಿಕ್ಷಣದವರೆಗೂ ಪ್ರತಿಯೊಂದು ಹಂತದಲ್ಲೂ ಕಲಿಕೆಯಲ್ಲಿ ಹೆಚ್ಚೆಚ್ಚು ಆಸಕ್ತಿ ಬೆಳೆಸಿಕೊಳ್ಳುತ್ತಾ ಹೋಗಿ ಅದನ್ನು ಹಾಗೆಯೇ ಉಳಿಸಿಕೊಂಡಲ್ಲಿ ಆಗ ಸಾಧನೆ ಎಂಬುದು ಶಿಕ್ಷಣದಲ್ಲಿ ಅಪಾರ ಕಲಿಕಾಸಕ್ತಿ ಹೊಂದಿರುವ ಸಾಧಕರ ಕೈವಶವಾಗುತ್ತದೆಂದರು.
ಆದರೆ, ವಿದ್ಯಾರ್ಥಿ ದಿಸೆಯಲ್ಲಿ ಯಾರು ಕಲಿಕೆಯಲ್ಲಿ ಆಸಕ್ತಿ ಕಳೆದು ಕೊಳ್ಳುತ್ತಾರೋ ಅವರು ವಿದ್ಯಾರ್ಥಿ ಜೀವನದಲ್ಲಿ ಏನನ್ನೂ ಸಾಧಿಸಲಾಗದು. ಹಾಗೆಯೇ ಭವಿಷ್ಯದಲ್ಲಿ ಎಲ್ಲದರಲ್ಲೂ ವಿಫಲರಾಗುತ್ತಾರೆ. ಇದಾಗಬಾರದೆಂದರೆ ವಿದ್ಯಾರ್ಥಿಗಳು ಕಲಿಯುವಿಕೆಯಲ್ಲಿ ಎಂದಿಗೂ ಆಸಕ್ತಿ ಕಳೆದು ಕೊಳ್ಳಬಾರದು. ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್ ಎನ್ನುತ್ತಾರೆ. ಈ ಮಾತು ಅಕ್ಷರಶಃ ಸತ್ಯ. ಇದು ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲೂ ಸಾರ್ಥಕವಾಗಿ ಅವರ ಜೀವನ ಚಿನ್ನದಂತಾಗಬೇಕಾದರೆ ಶೈಕ್ಷಣಿಕ ಸಾಧನೆಯೇ ಮಾನದಂಡವಾಗುತ್ತದೆ. ಕಾಲಕ್ಕೆ ತುಂಬಾ ಮಹತ್ವವಿದೆ. ಕಣ್ಣಿಗೆ ಕಾಣದಂತೆ ತನ್ನ ಪಾಡಿಗೆ ತಾನು ನಿಲ್ಲದೆ ಓಡುವ ಕಾಲಕ್ಕೆ ಬೆಲೆ ಕಟ್ಟಲಾಗದು. ಕಳೆದು ಹೋದ ಕಾಲ ಎಂದೂ ಮರಳದು. ಆದ್ದರಿಂದ ವಿದ್ಯಾರ್ಥಿಗಳು ಕಾಲದ ಮಹತ್ವವನ್ನೂ ಅರ್ಥ ಮಾಡಿಕೊಂಡು ಸಿಗುವ ಕಾಲವನ್ನು ಅದು ಕಳೆದು ಹೋಗುವ ಮುನ್ನ ಕಿಂಚಿತ್ತೂ ವ್ಯರ್ಥ ಮಾಡದೆ ಕಲಿಕೆಗಾಗಿಯೇ ಅದನ್ನು ಮೀಸಲಿಟ್ಟು ಸದ್ಬಳಕೆ ಮಾಡಿಕೊಂಡು ಭವಿಷ್ಯದಲ್ಲಿ ದೇಶದ ಸತ್ಪ್ರಜೆಗಳಾಗಬೇಕು ಎಂದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿರುವ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳಾದ ರಶ್ಮಿ, ನಾಗಮ್ಮ, ಎಚ್.ಎಸ್.ದೀಪಶ್ರೀ, ಹೇಮಾ, ಡಿ.ಲೋಹಿತ್, ನಮ್ರತಾ, ಪಲ್ಲವಿ, ಜಿ.ಅಕ್ಷಯ, ಬಿ.ಎಸ್.ಹರ್ಷಿತಾ, ವಿ.ವರುಣ, ಎಂ.ಜಯಂತಿ, ಎಂ.ಸೂರ್ಯ, ವಿ.ಸುರೇಶ, ಎಂ.ವಿಜಯ, ಕೆ.ಸಂಧ್ಯಾ, ಪಿ.ವಿ.ಮಹದೇವ, ಟಿ.ದೀಪಿಕಾ, ಎಂ.ರಾಧಿಕಾ, ಎಂ.ಪದ್ಮಾವತಿ, ಯಶಸ್ವಿನಿ ಅರಸ್ ಅವರುಗಳಿಗೆ ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಅವರು ಯುವ ಉದ್ಯಮಿ ಮೇಘನಾ ವೆಂಕಟೇಶ್ ಪ್ರಾಯೋಜಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸಮಯ ಪ್ರಜ್ಞೆ ಇರಬೇಕೆಂಬುದರ ಸಂಕೇತವಾಗಿ ಕೈಗಡಿಯಾರದೊಡನೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಗೋಪಾಲ ಸ್ವಾಮಿ, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಮೈಸೂರು ಕನ್ನಡ ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಕ್ತಕ ಕವಿ ಎಂ.ಮುತ್ತು ಸ್ವಾಮಿ, ಚಿತ್ರಕಲಾ ಶಿಕ್ಷಕ ಮನೋಹರ್, ಲೇಖಕ ವಿ.ನಾರಾಯಣರಾವ್, ಸಿರಿಗನ್ನಡ ವೇದಿಕೆಯ ಕವಯತ್ರಿ ನಾಗರತ್ನ, ಜಾದು ಕಲಾವಿದ ಗುರುಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.