ವಿದ್ಯೆಗೆ ಪ್ರಪಂಚ ಪರಿಚಯಿಸುವ ಶಕ್ತಿ ಇದೆ

ಕೋಲಾರ,ಜೂ,೨೪-ಪ್ರಪಂಚವನ್ನೇ ಪರಿಚಯಿಸುವ ವಿದ್ಯೆ ನಿಮ್ಮದಾಗಿಸುವ ಪ್ರಯತ್ನವನ್ನು ಮುಂದುವರೆಸಿ, ಉತ್ತಮ ಶಿಕ್ಷಣದಿಂದ ಸ್ವಾವಲಂಬಿ ಬದುಕು ನಿಮ್ಮದಾಗಿಸಿಕೊಳ್ಳಿ ಎಂದು ಎಪ್ಸನ್ ಕಂಪನಿ ಅಧ್ಯಕ್ಷ ಸಾಂಬ ಮೂರ್ತಿ ಕರೆ ನೀಡಿದರು.
ತಾಲೂಕಿನ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ವೇಮಗಲ್‌ನಲ್ಲಿ ಇಡೀ ತಾಲೂಕಿಗೆ ಒಂದರಿಂದ ೧೦ನೇ ತರಗತಿಯ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಬ್ಯಾಗ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಶಾಲೆಗಳ ಅಭಿವೃದ್ಧಿಗೆ ಕಾರ್ಪೊರೇಟ್ ಕಂಪನಿಗಳು ಉದ್ಯಮಿಗಳು ಹಳೆ ವಿದ್ಯಾರ್ಥಿಗಳು ಸಂಘ ಸಂಸ್ಥೆಗಳು ಯಾರು ಬೇಕಾದರೂ ನೆರವಾಗಲು ಇಚ್ಚಿಸಬಹುದು ತಾವು ಓದಿದ ಶಾಲೆಗೆ ಏನಾದರೂ ಒಂದು ಕೊಡುಗೆಯನ್ನು ನೀಡಬೇಕೆಂಬುದು ಅವರ ಮನದಲ್ಲಿ ಬರಬೇಕೆಂದರು.
ನಮ್ಮ ಕಂಪನಿಯು ಸುಮಾರು ವರ್ಷಗಳಿಂದ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಭೌತಿಕ ಸೌಲಭ್ಯಗಳನ್ನು ಒದಗಿಸುತ್ತಿರುವುದಲ್ಲದೆ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚುವಂತೆ ಮಾಡಲು ಸ್ಮಾರ್ಟ್ ಕ್ಲಾಸ್ ಗಳನ್ನ ಶಾಲೆಗಳಲ್ಲಿ ಅಳವಡಿಸಿ ಮಕ್ಕಳ ಶರವೇಗದ ಜ್ಞಾನಕ್ಕೆ ಹನಿಯಾಗುತ್ತಿರುವುದಾಗಿ ತಿಳಿಸಿದರು ನಾವು ನೀಡುವ ಪ್ರತಿಯೊಂದು ವಸ್ತುಗಳನ್ನು ಸಹ ಪ್ರಾಮಾಣಿಕವಾಗಿ ಶಿಕ್ಷಕರು ಸದುಪಯೋಗ ಪಡಿಸಿಕೊಂಡು ಮಕ್ಕಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಮುಂದಾಗಬೇಕೆಂದರು.
ಸರ್ಕಾರಿ ಶಾಲೆಗಳಲ್ಲೂ ಅನೇಕ ಸಾಧಕರಿದ್ದಾರೆ, ಈ ದೇಶ ಮಹಾನ್ ವ್ಯಕ್ತಿಗಳೆಲ್ಲಾ ಸರ್ಕಾರಿ ಶಾಲೆಗಳಲ್ಲೇ ಓದಿದವರು ಎಂಬ ಸತ್ಯ ಅರಿಯಬೇಕಿದೆ, ಈ ಮಕ್ಕಳಿಳಿಗೆ ಗುಣಮಟ್ಟದ ಕಲಿಕೆ ಜತೆಗೆ ಅಗತ್ಯ ಸೌಲಭ್ಯ ಒದಗಿಸಿದ್ದೇ ಆದಲ್ಲಿ ನಮ್ಮ ದೇಶದ ಶೈಕ್ಷಣಿಕ ಪ್ರಗತಿ ವಿಶ್ವಕ್ಕೆ ಮಾದರಿಯಾಗುತ್ತದೆ ಎಂದರು.
ನಮ್ಮ ಸಂಸ್ಥೆ ಸರ್ಕಾರಿ ಶಾಲೆಗಳ ಬಡ ಮಕ್ಕಳಿಗೆ ನೆರವಾಗುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದೆ, ಇಂತಹ ಕಾರ್ಯಕ್ಕೆ ಕೋಲಾರದ ಶಿಕ್ಷಕ ಗೆಳೆಯರ ಬಳಗ ಸಾಥ್ ನೀಡಿದ್ದು, ನಾವು ನೀಡಿದ್ದನ್ನು ಅತ್ಯಂತ ಪ್ರಾಮಾಣಿಕವಾಗಿ ಮಕ್ಕಳಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಶಿಕ್ಷಕ ಗೆಳೆಯರ ಬಳಗದ ಅಧ್ಯಕ್ಷ ಎಸ್.ನಾರಾಯಣಸ್ವಾಮಿ ಮಾತನಾಡಿ, ಎಪ್ಸನ್ ಕಂಪನಿ ಹಲವಾರು ವರ್ಷಗಳಿಂದ ಜಿಲ್ಲೆಯ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಶ್ರಮಿಸುತ್ತಿದ್ದು, ಅಪಾರ ಕೊಡುಗೆ ನೀಡಿದೆ, ಪಠ್ಯಪುಸ್ತಕ, ಸಮವಸ್ತ್ರ, ಶೂ, ವಾಟರ್‌ಫಿಲ್ಟರ್, ಹೀಗೆ ಹಲವಾರು ಸೌಲಭ್ಯ ನೀಡಿದೆ ಎಂದು ಧನ್ಯವಾದ ಸಲ್ಲಿಸಿದರು.
ಎಪ್ಸನ್ ಕಂಪನಿಯ ಉಪಾಧ್ಯಕ್ಷ ಶೋಗೋ ಸಿರಿಕಾವ, ರಾಜೇಂದ್ರ, ಶಿಕ್ಷಕ ಗೆಳೆಯರ ಬಳಗದ ಗೌರವಾಧ್ಯಕ್ಷ ಆರ್.ಶ್ರೀನಿವಾಸನ್, ಉಪಾಧ್ಯಕ್ಷ ವೀರಣ್ಣಗೌಡ, ಕಾರ್ಯದರ್ಶಿ ವೆಂಕಟಚಲಪತಿ ಗೌಡ, ಸೋಮಶೇಖರ್, ಕೃಷ್ಣಪ್ಪ, ಸಿಆರ್‌ಪಿಗಳಾದ ವೆಂಕಟಚಲಪತಿ, ಚಂದ್ರಶೇಖರ್, ದಿವ್ಯ, ಸರಿತಾ, ಮುಖ್ಯೋಪಾಧ್ಯಾಯರಾದ ವೆಂಕಟೇಶಪ್ಪ, ದೈಹಿಕ ಶಿಕ್ಷಕ ವೆಂಕಟೇಶ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.