ವಿದ್ಯೆಗೆ ತಾರತಮ್ಯ ಎಂಬುದಿಲ್ಲ ಸ್ವೀಕರಿಸುವವರಲ್ಲಿ ಮಾತ್ರ ತಾರತಮ್ಯ

ಕೆ.ಆರ್.ಪೇಟೆ.ಆ.01:- ವಿದ್ಯೆಗೆ ತಾರತಮ್ಯ ಎಂಬುದಿಲ್ಲ. ಆದರೆ ಅದನ್ನು ಸ್ವೀಕರಿಸುವವರಲ್ಲಿ ಮಾತ್ರ ತಾರತಮ್ಯವಿದೆ. ಸಾಧಕರು ಮಾತ್ರ ಎಲ್ಲವನ್ನೂ ಬದಿಗೆ ಸರಿಸಿ ಮುನ್ನಗ್ಗುತ್ತಾರೆ ಎಂದು ತುಮಕೂರಿನ ಬಂಡಿ ಎಜುಕೇಷನ್ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷರಾದ ಗುಬ್ಬಿ ಜಿ.ಬಿ.ಮಲ್ಲಪ್ಪ ಹೇಳಿದರು.
ಅವರು ಪಟ್ಟಣದಲ್ಲಿರುವ ಕೃಷ್ಣರಾಜ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಿದ್ದ 2022-23ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಧನೆಗೆ ನಮ್ಮದು ಹಳ್ಳಿಯ ಜೀವನ. ನಮಗೆ ಪ್ರಮುಖವಾಗಿ ಭಾಷಾ ಸಮಸ್ಯೆ ಕಾಡುತ್ತದೆ ಎಂಬುದೆಲ್ಲಾ ಸುಳ್ಳು ನೆಪಗಳಾಗಿವೆ. ಸಾಧಿಸುವ ಛಲ ಮನುಷ್ಯರಲ್ಲಿದ್ದರೆ ಏನೆಲ್ಲಾ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಈಗಾಗಲೆ ಅನೇಕ ಮಹನೀಯರು ತೋರಿಸಿಕೊಟ್ಟಿದ್ದಾರೆ. ಅಖಂಡ ಭಾರತ ಕಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಮಹನೀಯರು ಗ್ರಾಮೀಣ ಹಿನ್ನೆಲೆಯುಳ್ಳವರೆ. ಇವರ ಜೀವನದ ಪಾಠವನ್ನು ಯುವಕರು ಓದಬೇಕು. ಇಂದು ದೇಶಕ್ಕೆ ಯುವಕರ ಶಕ್ತಿ ಬೇಕಾಗಿದೆ. ಯುವಕರೆ ಆಧಾರ ಸ್ತಂಭಗಳು. ಆದ್ದರಿಂದ ಯುವಕರು ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಜಿ.ಬಿ.ಮಲ್ಲಪ್ಪ ಹೇಳಿದರು.
ವಿದ್ಯಾರ್ಥಿಗಳು ಜೀವನದಲ್ಲಿ ಮೊದಲು ಶಿಸ್ತು ಮತ್ತು ಸಂಯಮವನ್ನು ಅಳವಡಿಸಿಕೊಳ್ಳಬೇಕು. ಶ್ರದ್ಧೆಯಿಂದ ಬದ್ದತೆಯಿಂದ ವಿದ್ಯಾಭ್ಯಾಸ ಮಾಡಿದರೆ ಖಂಡಿತವಾಗಿಯೂ ನೀವು ಅದರಲ್ಲಿ ಜಯಗಳಿಸುತ್ತೀರಾ. ಈ ನಂಬಿಕೆ ನಮಗೆಲ್ಲರಿಗೂ ಇದೆ. ನಿಮ್ಮ ಕಾಲೇಜು ದಿನಗಳ ಸಂದರ್ಭದಲ್ಲಿ ಉತ್ತಮ ಸ್ನೇಹ ಗಳಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಮುಂದೊಂದು ದಿನ ನಿಮ್ಮ ಕಾಲೇಜು ದಿನಗಳ ಸವಿಯಾದ ಮೆಲುಕನ್ನು ಹಾಕಬಹುದು. ಯುವಕರು ಸ್ವಯಂ ಪ್ರೇರಣೆಯಿಂದ ಸಮಾಜ ಮುಖಿ ಕಾರ್ಯಗಳಲ್ಲಿ ಭಾಗವಹಿಸಬೇಕು. ಸಮಾಜಮುಖಿ ಕಾರ್ಯಗಳು ಶಿಕ್ಷಣದ ನಂತರ ಉತ್ತಮ ಜೀವನ ರೂಪಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಮಲ್ಲಪ್ಪ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಡಿ ವಿದ್ಯಾಸಂಸ್ಥೆ ಗುಬ್ಬಿಯ ಅಧ್ಯಕ್ಷರಾದ ಉಂಡೆ ರಾಮಯ್ಯ ಅವರು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಬಿ ಚಂದ್ರಶೇಖರ್ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಅರೆಬೊಪ್ಪನಹಳ್ಳಿ ಚಂದ್ರು, ಎಸ್,ಶಿವಸ್ವಾಮಿ, ನಾಗರಂಗಯ್ಯ, ಕಾಲೇಜಿನ ಉಪನ್ಯಾಸಕರಾದ ಗಿರೀಶ್ ಯಲ್ಲೂರ್, ನಂಜೇಗೌಡ, ಎನ್.ರಾಮಲಿಂಗ, ಕೃಷ್ಣಪ್ಪ, ಶ್ರೀಧರ್, ಹರೀಶ್, ಸುವರ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.