ವಿದ್ಯುನ್ಮಾನ, ಸಾಮಾಜಿಕ ಜಾಲತಾಣ, ಇ-ಪತ್ರಿಕೆಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳಿಗೆ ಪೂರ್ವಾನುಮತಿ ಕಡ್ಡಾಯ

ಬಳ್ಳಾರಿ ಏ.15 :ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ಜಾಹೀರಾತುಗಳಿಗೆ ಜಿಲ್ಲಾ ಎಂ.ಸಿ.ಎಂ.ಸಿಯಿಂದ  ಪ್ರಮಾಣೀಕರಣ ಪಡೆದುಕೊಳ್ಳುವುದು ಕಡ್ಡಾಯವಾಗಿದೆ ಹಾಗೂ ಇ-ಪತ್ರಿಕೆಗಳಲ್ಲಿ ಪ್ರಸಾರವಾಗುವ ಜಾಹೀರಾತುಗಳಿಗೂ ಪೂರ್ವಾನುಮತಿ ಅಗತ್ಯ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪವನ್ ಕುಮಾರ್ ಮಾಲಪಾಟಿ ತಿಳಿಸಿದ್ದಾರೆ. 
ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣದಲ್ಲಿ ರಾಜಕೀಯಕ್ಕೆ ಸಂಬಂಧಿಸಿದ ವಿಷಯ ಬಿತ್ತರಗೊಳಿಸಲು ಪೂರ್ವಾನುಮತಿ  ಕಡ್ಡಾಯ ಮಾಡಲಾಗಿದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೆ ಪೂರ್ವಾನುಮತಿ ಅಗತ್ಯವಿಲ್ಲ. ಆದರೆ ಮತದಾನ ಕೊನೆಗೊಳ್ಳುವ 48 ಗಂಟೆ ಮುಂಚಿತವಾಗಿ ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಗೊಳಿಸುವ ಜಾಹೀರಾತುಗಳಿಗೆ ಪ್ರಮಾಣೀಕರಣ ಪಡೆಯುವುದು ಅಗತ್ಯವಾಗಿದೆ.  ಪ್ರಮಾಣೀಕರಣ ಪಡೆಯಲು ಎರಡು ದಿನ ಮೊದಲು ಅರ್ಜಿ ಸಲ್ಲಿಸಬೇಕು ಎಂದರು.
ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಸಿಗಾಗಿ ಸುದ್ದಿ (ಪೇಯ್ಡ್ ನ್ಯೂಸ್) ಪರಿಶೀಲನೆಗೆ, ಜಾಹೀರಾತುಗಳ ಪ್ರಮಾಣೀಕರಣಕ್ಕೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಾಧ್ಯಮ ಮತ್ತು ಕಣ್ಗಾವಲು ಸಮಿತಿ ರಚಿಸಲಾಗಿದೆ. ಪತ್ರಿಕೆಗಳ ಜಾಹೀರಾತು, ವಿದ್ಯುನ್ಮಾನ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ಜಾಹೀರಾತುಗಳನ್ನು ಪ್ರತಿ ನಿತ್ಯವೂ ನಿಗಾ ವಹಿಸಲಾಗುತ್ತಿದೆ.  ಜಾಹೀರಾತು ವೆಚ್ಚಗಳನ್ನು ಅಭ್ಯರ್ಥಿಗಳ ಚುನಾವಣಾ ಲೆಕ್ಕಕ್ಕೆ ತೋರಿಸಲಾಗುವುದು.  ಅಭ್ಯರ್ಥಿಯ ಪರವಾಗಿ ಹಾಗೂ ಅಭ್ಯರ್ಥಿಯನ್ನು ಹೊಗಳಿ ಬರೆಯುವುದು, ಸುದ್ದಿ, ಲೇಖನವು ಮತದಾರರಿಗೆ ಪ್ರಭಾವ ಬೀರುವಂತಹದಿದ್ದರೆ ಅದನ್ನು ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಲಾಗುತ್ತದೆ. ಕಾಸಿಗಾಗಿ ಸುದ್ದಿ ಪ್ರಕಟವಾದರೆ ಚುನಾವಣಾಧಿಕಾರಿ ಮೂಲಕ ಸಂಬಂಧಪಟ್ಟ ಅಭ್ಯರ್ಥಿಗೆ ನೋಟೀಸ್ ಜಾರಿಗೊಳಿಸಲಾಗುವುದು. ಕಾಸಿಗಾಗಿ ಸುದ್ದಿ ಖಚಿತಗೊಂಡರೆ ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸಲಾಗುವುದು. 
ಅಭ್ಯರ್ಥಿಗಳು ವಾಹನ, ಧ್ವನಿವರ್ಧಕ, ಸಭೆ, ಸಮಾರಂಭ, ರ್ಯಾಲಿ ಸೇರಿದಂತೆ ವಿವಿಧ ಅನುಮತಿ ಪಡೆಯಲು ಏಕ ಗವಾಕ್ಷಿ ವ್ಯವಸ್ಥೆ “ಸುವಿಧಾ” ತಂತ್ರಾಂಶದಲ್ಲಿ https://suvidha.eci.gov.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.  ಅದೇ ರೀತಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಸಿ-ವಿಜಿಲ್ ತಂತ್ರಾಂಶದಲ್ಲಿ ದೂರು ದಾಖಲಿಸಲು ಅವಕಾಶವಿದೆ.
ಚುನಾವಣೆ ಸಂದರ್ಭದಲ್ಲಿ ವಿದ್ಯುನ್ಮಾನ ಮಾಧ್ಯಮ, ಡಿಜಿಟಲ್ ಮಾಧ್ಯಮ, ವಾಯ್ಸ್ ಮೆಸೇಜ್ ಹಾಗೂ ಸಾಮಾಜಿಕ ಜಾಲತಾಣಗಳ ವೆಬ್‍ಸೈಟ್‍ನಲ್ಲಿ ಜಾಹೀರಾತು ಹಾಕಲು ಬಯಸುವ ಅಭ್ಯರ್ಥಿಗಳು ಅನುಸರಿಸಬೇಕಾದ ನಿಯಮಗಳ ಬಗ್ಗೆ ಚುನಾವಣಾ ಆಯೋಗ ಸ್ಪಷ್ಟ ಸೂಚನೆಯನ್ನು ನೀಡಿದ್ದು, ಯಾವುದೇ ಜಾಹೀರಾತುಗಳನ್ನು ಪ್ರಕಟಪಡಿಸುವ ಮುನ್ನ ಜಿಲ್ಲಾ ಮಟ್ಟದ ಎಂ.ಸಿ.ಎಂ.ಸಿ. ಸಮಿತಿಯಿಂದ ಕಡ್ಡಾಯವಾಗಿ ಕ್ಲಿಯರೆನ್ಸ್ ಪ್ರಮಾಣ ಪತ್ರ ಪಡೆದ ನಂತರವೇ ಬಿತ್ತರಿಸಬೇಕು.  ರಾಜಕೀಯ ಪಕ್ಷಗಳು ಜಾಹೀರಾತಿಗಾಗಿ ರಾಜ್ಯ ಮಟ್ಟದ ಎಂಸಿಎಂಸಿ ಸಮಿತಿಗೆ ಅರ್ಜಿ ಸಲ್ಲಿಸಬೇಕು.  ಅಭ್ಯರ್ಥಿಗಳು ಜಿಲ್ಲಾ ಮಟ್ಟದ ಎಂಸಿಎಂಸಿ ಸಮಿತಿಗೆ ಅರ್ಜಿ ಸಲ್ಲಿಸಬೇಕು.  ಇದಕ್ಕಾಗಿ ಆಯಾ ಅಭ್ಯರ್ಥಿಗಳು ನಿಗದಿತ ನಮೂನೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಉಚಿತವಾಗಿ ಪಡೆಯಬಹುದು.  ಅರ್ಜಿಯೊಂದಿಗೆ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ, ಪ್ರಕಟಿಸಲು ಉದ್ದೇಶಿಸಿರುವ ಜಾಹೀರಾತಿನ ಪ್ರತಿ, ಸಿ.ಡಿ. ಪೆನ್‍ಡ್ರೈವ್, ಸಿಡಿ ಯಲ್ಲಿ ಇರುವ ಭಾಷಣ ಅಥವಾ ಸಂದೇಶದ ಮುದ್ರಿತ ಪ್ರತಿಯನ್ನು ದೃಢೀಕರಿಸಿ ಎರಡು ಸೆಟ್‍ನೊಂದಿಗೆ ಲಗತ್ತಿಸಿ  ಅಭ್ಯರ್ಥಿ ಅಥವಾ ಅಭ್ಯರ್ಥಿಯಿಂದ ಅನುಮತಿ ಪಡೆದ ವ್ಯಕ್ತಿಗಳು ಸಲ್ಲಿಸಿದಲ್ಲಿ, ಅರ್ಜಿಯನ್ನು ಸಮಿತಿಯು ಪರಿಶೀಲಿಸಿ, ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡಲು ಕ್ರಮ ವಹಿಸಲಿದೆ.  ಎಂಸಿಎಂಸಿ ಸಮಿತಿಯಿಂದ ಕ್ಲಿಯರೆನ್ಸ್ ಪ್ರಮಾಣಪತ್ರ ಪಡೆಯದೆ ಯಾವುದೇ ಟಿ.ವಿ., ಕೇಬಲ್, ಇ-ಪೇಪರ್, ವೆಬ್‍ಪೋರ್ಟಲ್, ಯುಟ್ಯೂಬ್, ಫೇಸ್‍ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳ ವೆಬ್‍ಸೈಟ್‍ನಲ್ಲಿ ಜಾಹೀರಾತು, ಸ್ಕ್ರೋಲ್ ಮೆಸೇಜ್ ಮತ್ತಿತರ ಜಾಹೀರಾತುಗಳನ್ನು ಪ್ರಸಾರ ಮಾಡುವಂತಿಲ್ಲ.  ತಪ್ಪಿದಲ್ಲಿ, ಚುನಾವಣಾ ಆಯೋಗದ ಸೂಚನೆಯಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.