ವಿದ್ಯುನ್ಮಾನ ಮತ್ತು ಸೋಷಿಯಲ್ ಮೀಡಿಯಾಗಳು ವಿಶ್ವಾಸ ಉಳಿಸಿಕೊಳ್ಳಲಿ: ಡಾ. ಸತ್ಯಂಪೇಟೆ

ಕಲಬುರಗಿ: ನ.13:ಶ್ರವ್ಯ ಹಾಗೂ ದೃಶ್ಯಗಳ ಸಂಗಮವಾಗಿರುವ ಎಲೆಕ್ಟ್ರಾನಿಕ್ ಮತ್ತು ಸೋಷಿಯಲ್ ಮೀಡಿಯಾಗಳಿಗೆ 21ನೇ ಶತಮಾನದಲ್ಲಿ ಅಗ್ರಸ್ಥಾನವಿದೆ ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.

ನಗರದ ಗೋದುತಾಯಿ ಮಹಿಳಾ ಪದವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ‘ಮಿಡಿಯಾ ವಾಲ್ಯೂಸ್ ಇನ್ ದ ಪ್ರಜೆಂಟ್ ಸಿನೆರಿಯೋ’ ವಿಷಯ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿದ್ಯುನ್ಮಾನ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ಕುರಿತ ಮೊದಲ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಾಹಿತಿ, ಮನೋರಂಜನೆ ಜೊತೆಗೆ ಅರಿವು, ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.

ಈ ಮೀಡಿಯಾಗಳಲ್ಲಿ ಸುಳ್ಳು ಸುದ್ದಿಗಳನ್ನು ಸಹ ಸಾಕಷ್ಟು ಪ್ರಮಾಣದಲ್ಲಿ ಹರಿಬಿಡಲಾಗುತ್ತಿದ್ದು, ಇವುಗಳ ಸತ್ಯಾಸತ್ಯತೆಯನ್ನು ಒರೆಗಲ್ಲಿಗೆ ಹಚ್ಚಿ ನಂಬಬೇಕು. ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವಂತೆ ಸಮೂಹ ಮಾಧ್ಯಮ ಕ್ಷೇತ್ರದಲ್ಲಿ ನೈತಿಕತೆಯ ಗೈರು ಹಾಜರಿ ಎದ್ದು ಕಾಣುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹೈದರಾಬಾದ್ ನ ಡಾ. ಧಮೇರ್ಂದ್ರ ಪೂಜಾರಿಯವರು ಈ ಕ್ಷೇತ್ರದಲ್ಲಾಗುತ್ತಿರುವ ಬದಲಾವಣೆ ಇದರ ಒಳಿತು- ಕೆಡುಕುಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ನಂತರ ನಡೆದ ಗೋಷ್ಠಿಯಲ್ಲಿ ನಮ್ರತಾರಾವ ಮಾಧ್ಯಮದಲ್ಲಿ ಮಹಿಳೆಯನ್ನು ಕೇವಲ ಕೈಗೊಂಬೆಯನ್ನಾಗಿ ಮಾಡಲಾಗುತ್ತಿದೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಇಂದಿಗೂ ನಲುಗುತ್ತಿದ್ದು, ಅದರಿಂದ ಮಹಿಲಕೆ ಹೊರ ಬರಬೇಕು ಎಂದು ತಿಳಿಸಿದರು. ಡಾ. ಸುನಿತಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆಯಲ್ಲಿ ಡಾ. ಶಿವರಂಜನ್ ಸತ್ಯಂಪೇಟೆ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.