
ಅಥಣಿ : ಮಾ.12: ಮತಯಂತ್ರಗಳು ಕಳೆದ ಬಾರಿಗಿಂತ ಈ ಬಾರಿ ವಿಶಿಷ್ಟವಾದ ತಂತ್ರಜ್ಞಾನದಲ್ಲಿ ನವೀಕರಣಗೊಂಡಿವೆ. ಮತಗಟ್ಟೆಗಳಲ್ಲಿ ವಿವಿಪ್ಯಾಡ್ ಕುರಿತು ಜನಜಾಗ್ರತಿ ಮೂಡಿಸಲಾಗುತ್ತಿದೆ. ಇದರ ಮತದಾರರು ಇದರ ಮಾಹಿತಿ ಪಡೆದುಕೊಳ್ಳಬೇಕು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರ ಎ ಜಿ ಮುಲ್ಲಾ ಹೇಳಿದರು.
ಅವರು ಅಥಣಿ ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ವಿವಿಪ್ಯಾಡ್ ಯಂತ್ರದ ಬಳಕೆಯ ಕುರಿತ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಬೇಕು ಮತ್ತು ಮತದಾರರು ಮತಯಂತ್ರಗಳನ್ನು ಯಾವ ರೀತಿ ಬಳಕೆ ಮಾಡಬೇಕು ಎಂಬ ಜನಜಾಗೃತಿ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ತಾಲೂಕಿನ ಮತದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಅಥಣಿ ಗ್ರಾಮ ಆಡಳಿತ ಅಧಿಕಾರಿ ಎಂ ಎಂ ಮಿರ್ಜಿ ಮಾತನಾಡಿ ಮತದಾನ ವಿದ್ಯುನ್ಮಾನ ಯಂತ್ರದ ಬಳಕೆಯ ಬಗ್ಗೆ ಮತ್ತು ಮತದಾನ ಖಾತ್ರಿ ಪಡಿಸಿಕೊಳ್ಳುವ ಬಗ್ಗೆ ಪ್ರಾತ್ಯಕ್ಷಿಕೆ ತಿಳಿಸಿದ ಅವರು ಚುನಾವಣೆಗಳು ಪಾರದರ್ಶಕವಾಗಿ ನಡೆಯಬೇಕು. ಮತ್ತು ಚುನಾವಣಾ ಪ್ರಕ್ರಿಯೆ ವಿಷಯದಲ್ಲಿ ವಿಶ್ವಾಸ ಮೂಡಿಸಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮತದಾನ ಖಾತ್ರಿ ಮತ್ತು ಮತಯಂತ್ರಗಳ ಬಗ್ಗೆ ಪ್ರತಿಯೊಬ್ಬರೂ ಮಾಹಿತಿ ಪಡೆದುಕೊಳ್ಳುವುದು ಅವಶ್ಯಕತೆ ಇದೆ, ಚುನಾವಣೆಯಲ್ಲಿ ಮತದಾರರು ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭತ್ವವನ್ನು ಶಕ್ತಿಯುತಗೊಳಿಸಬೇಕು ಎಂದು ಹೇಳಿದರು.
ಈ ವೇಳೆ ಅಥಣಿ ಪುರಸಭೆಯ ಜಿ ಬಿ ಕೆಂಪಶೆಟ್ಟಿ, ಸಂಕೋನಟ್ಟಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆರ್ ಎ ಕರಾಂಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.