ವಿದ್ಯುನ್ಮಾನ ಮತಯಂತ್ರದ ಪ್ರಾತ್ಯಕ್ಷಿಕೆ

ಗದಗ, ಮಾ 15: ಪ್ರಜಾಪ್ರಭುತ್ವ ಬಲಿಷ್ಟಗೊಳಿಸುವಲ್ಲಿ ಮತದಾನದ ಪಾತ್ರ ಪ್ರಮುಖವಾಗಿದೆ. ಅರ್ಹ ಮತದಾರರು ತಪ್ಪದೇ ಮತದಾನ ಮಾಡಬೇಕೆಂದು ಡಯಟ್ ಉಪನ್ಯಾಸಕರಾದ ಜಿ.ಡಿ. ದಾಸರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸ್ವೀಪ್ ಸಮಿತಿಯಿಂದ ಮಂಗಳವಾರದಂದು ಬೆಟಗೇರಿಯ ಹೊಸಗರಡಿ ಓಣಿಯಲ್ಲಿ (ಕಲ್ಮಠ) ವಿದ್ಯುನ್ಮಾನ ಮತಯಂತ್ರ್ರದ ಪ್ರಾತ್ಯಕ್ಷಿಕೆಯನ್ನು ಸಾರ್ವಜನಿಕರಿಗೆ ಪ್ರಸ್ತುತಪಡಿಸಿ ಮಾತನಾಡಿದರು.
ಪ್ರತಿ ಮತಗಟ್ಟೆಯಲ್ಲಿ ವಿದ್ಯುನ್ಮಾನ ಮತಯಂತ್ರ (ಇ.ವಿ.ಎಂ) ಹಾಗೂ ವಿ.ವಿ.ಪ್ಯಾಟ ಪೆಟ್ಟಗೆ ಇಡಲಾಗುತ್ತದೆ. ಮತದಾರ ಮತಗಟ್ಟೆಗೆ ಮತ ಚಲಾಯಿಸಲು ಬಂದಾಗ ಮತಯಂತ್ರದಲ್ಲಿ ಹಸಿರು ದೀಪ ಉರಿಯುತ್ತಿರುವದನ್ನು ಖಚಿತಪಡಿಸಿಕೊಂಡು ಬ್ಯಾಲೇಟ್ ಯುನಿಟನಲ್ಲಿ ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರು, ಚಿಹ್ನೆಯ ಎದುರು ಇರುವ ನೀಲಿ ಗುಂಡಿ ಒತ್ತುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ನಂತರ ಕೆಂಪು ದೀಪ ಹಾಗೂ ಚೀಪ್ ಸದ್ದು ಮತದಾನವಾಗಿರುವದನ್ನು ಖಚಿತಪಡಿಸುತ್ತದೆ. ಬಳಿಕ ಪಕ್ಕದಲ್ಲಿರುವ ವಿ.ವಿ.ಪ್ಯಾಟ ಯಂತ್ರದಲ್ಲಿ ತಾವು ಮತ ಚಲಾಯಿಸಿದ ಅಭ್ಯರ್ಥಿಯ ಕ್ರಮ ಸಂಖ್ಯೆ, ಹೆಸರು ಹಾಗೂ ಚಿಹ್ನೆಯನ್ನು ಒಳಗೊಂಡಿರುವ ಚೀಟಿಯನ್ನು ಏಳು ಸೆಕೆಂಡವರೆಗೆ ಮತದಾರ ನೋಡಿ, ಮತದಾನವನ್ನು ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ವಿದ್ಯುನ್ಮಾನ ಮತಯಂತ್ರದ ಬಳಕೆಯ ಪ್ರತಿ ಹಂತಗಳನ್ನು ವಿವರಿಸಿ ಪ್ರಾತ್ಯಕ್ಷಿಕೆಯನ್ನು ಸಾದರಪಡಿಸಿದರು.
ಈ ಸಂದರ್ಭದಲ್ಲಿ ಬಿ.ಎಲ್.ಓಗಳು,ಮಹಿಳೆಯರು, ಇಬ್ಬರು ಮಂಗಳಮುಖಿಯರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ನಂತರ ಕಬಾಡಿ ರೋಡನಲ್ಲಿ ಸಂಕಪ್ಪಜ್ಜನಮಠದ ಹತ್ತಿರ ಸಾರ್ವಜನಿಕರಿಗೆ ವಿದ್ಯುನ್ಮಾನ ಮತ ಯಂತ್ರದ ಪ್ರಾತ್ಯಕ್ಷಿಕೆ ಪ್ರಸ್ತುತಪಡಿಸಲಾಯಿತು.