ವಿದ್ಯುತ್ ಸ್ಪರ್ಶದಿಂದ ಯುವಕ ಸಾವು

ಕಂಪ್ಲಿ ಜೂ 03: ತಾಲೂಕಿನ ದೇವಲಾಪುರ ಗ್ರಾಮದ ಜಮೀನಿನಲ್ಲಿನ ಪಂಪ್ಸೆಟ್ ಬಳಿ ತೆರಳಿದ್ದ ಯುವಕನೋರ್ವನಿಗೆ ಆಕಸ್ಮಿಕ ವಿದ್ಯುತ್ ತಗುಲಿ ಸಾವನ್ನಪ್ಪಿರುವ ದಾರುಣ ಘಟನೆ ಗುರುವಾರ ಘಟಿಸಿದೆ.

ಯುವಕ ಗಾದಿಲಿಂಗಪ್ಪ(22) ಮೃತ ದುರ್ದೈವಿ. ಜೂ.2ರ ಬುಧವಾರ ರಾತ್ರಿ ಎಲ್ಲೆಡೆ ಸುರಿದ ಧಾರಾಕಾರ ಮಳೆಯಿಂದ ದೇವಲಾಪುರ ಗ್ರಾಮದ ಹೊರವಲಯದ ಹೊಲಗಳಲ್ಲಿ ಅಳವಡಿಸಲಾಗಿರುವ ವಿದ್ಯುತ್ ಕಂಬಗಳ ತಂತಿಗಳು ಅಲ್ಲಲ್ಲಿ ಸಡಿಲಗೊಂಡಿದ್ದವು. ಬೆಳಗ್ಗೆ ಗಾದಿಲಿಂಗಪ್ಪ ಕೃಷಿ ಚಟುವಟಿಕೆ ನಿಮಿತ್ತ ಹೊಲಕ್ಕೆ ತೆರಳಿದ್ದಾನೆ. ಬಳಿಕ‌ ಹೊಲದಲ್ಲಿನ ಪಂಪ್ಸೆಟ್ ಬಳಿ ತೆರಳಿದ ಸಂದರ್ಭದಲ್ಲಿ ಆತನಿಗೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಮೃತ ಯುವಕ ಗ್ರಾಮದ ಮೀಸೆ ಬಿಳಿಕಲ್ಲಪ್ಪ ಅವರ ಏಕೈಕ ಪುತ್ರನಾಗಿದ್ದು, ಇದ್ದ ಓರ್ವ ಪುತ್ರನ ಆಕಸ್ಮಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.