ವಿದ್ಯುತ್ ಸ್ಪರ್ಶದಿಂದ ಮಂಗನ ಸಾವು

ಅರಕೇರಾ,ಏ.೨೧- ಪಟ್ಟಣದ ಕುಂಬಾರ ಓಣಿಯಲ್ಲಿ ವಿದ್ಯುತ್ ಸ್ಪರ್ಶವಾಗಿ ಬಾಲ ಮಂಗವೊಂದು ಸಾವನ್ನಪ್ಪಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ವಿದ್ಯುತ್ ಸ್ಪರ್ಶದಿಂದ ಅಸ್ವಸ್ಥಗೊಂಡ ಮಂಗನನ್ನು ಕಂಡು ಸ್ಥಳೀಯ ನಿವಾಸಿ ಹುಸೇನ್ ಭಾಷ ಬೆಳಗ್ಗೆಯಿಂದ ಬದುಕುಳಿಸುವುದಕ್ಕೆ ಅನೇಕ ಪ್ರಯತ್ನ ನಡೆಸಿ, ಚಿಕಿತ್ಸೆಗಾಗಿ ಅಲೆದಾಡಿದರು ಫಲಕಾರಿಯಾಗದೆ ಮಂಗ ಅಸುನೀಗಿದೆ. ಬಳಿಕ ಸೈಕಲ್‌ಗೆ ಅಲಂಕಾರ ಮಾಡಿ, ಮಂಗನನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಟಾಕಿ ಸಿಡಿಸುವ ಮೂಲಕ ಮೆರವಣಿಗೆ ಮಾಡಲಾಯಿತು. ವಾರದ ಸಂತೆ ಇದ್ದ ಕಾರಣ ಸಂತೆಗೆ ಬಂದ ಕೆಲ ಜನ ಮಂಗನಿಗೆ ದಕ್ಷಿಣೆ, ಮಂಡಕ್ಕಿ ಹಾಕಿ ನಮಿಸಿದರು. ಪಟ್ಟಣದ ಹೊರ ವಲಯದಲ್ಲಿ ಮಂಗನ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಾನವೀಯತೆ ಮೆರೆದ ಹುಸೇನ್ ಭಾಷ, ಹನುಮಂತ ಶ್ಲಾಘನೆಗೆ ಒಳಪಟ್ಟರು.