ವಿದ್ಯುತ್ ಸರಬರಾಜಿಗೆ ಆಗ್ರಹಿಸಿ ಮನವಿ

ಲಕ್ಷ್ಮೇಶ್ವರ,ಮಾ26: ಸಮೀಪದ ಅಡರಕಟ್ಟಿ ಗ್ರಾಮದ ರೈತರ ಪಂಪ ಸೆಟ್ಟುಗಳಿಗೆ ನಿಯಮಿತವಾಗಿ ವಿದ್ಯುತ್ ಸರಬರಾಜು ಮಾಡುತ್ತಿಲ್ಲ, ಇದರಿಂದ ಸಾವಿರಾರು ರೂಗಳನ್ನು ಖರ್ಚು ಮಾಡಿ ಬೇಸಿಗೆ ಹಂಗಾಮಿನಲ್ಲಿ ಬೆಳೆದ ಬೆಳೆಗಳು ಒಣಗಿ ಹೋಗುತ್ತಿವೆ, ಇನ್ನೊಂದು ವಾರದಲ್ಲಿ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೆ ಹೋದಲ್ಲಿ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ರೈತ ಪ್ರಕಾಶ ಶಿರಹಟ್ಟಿ ಹೇಳಿದರು.
ಅಡರಕಟ್ಟಿ ವ್ಯಾಪ್ತಿಯ ಹರದಗಟ್ಟಿ ಹೆಸ್ಕಾಂ ವಿಭಾಗದಲ್ಲಿ ಅನಿಯಮಿತ ವಿದ್ಯುತ್ ನಿಲುಗಡೆ ಖಂಡಿಸಿ ಗುರುವಾರ ಪಟ್ಟಣದ ಹೆಸ್ಕಾಂ ಶಾಖಾಧಿಕಾರಿ ಸಂತೋಷ ನಾಯ್ಕ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
ಲಕ್ಷ್ಮೇಶ್ವರ ವ್ಯಾಪ್ತಿಯ ಗ್ರಾಮೀಣ ಭಾಗದ ಹೆಸ್ಕಾಂ ಫೀಡರ್‍ಗಳಲ್ಲಿ ನಿರಂತರ ವಿದ್ಯುತ್ ನಿಲುಗಡೆಯಾಗುತ್ತಿದ್ದು ಇದರಿಂದ ರೈತರು ಸಾಕಷ್ಟು ತೊಂದರೆಗೆ ಒಳಗಾಗುತ್ತಿದ್ದಾರೆ. ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಶೇಂಗಾ ಈಗ ಕಾಯಿ ಕಟ್ಟುವ ಹಂತದಲ್ಲಿದ್ದು, ನೀರಿನ ಪೂರೈಕೆ ಸರಿಯಾಗಿ ಆಗದೇ ಹೋದಲ್ಲಿ 4-5 ತಿಂಗಳ ನಮ್ಮ ಶ್ರಮ ವ್ಯರ್ಥವಾಗುತ್ತಿದೆ. ಅಲಸಂದಿ ಬೆಳೆಯು ಕಾಯಿ ಬಿಡುವ ಹಂತದಲ್ಲಿದ್ದು ನೀರು ಅವಶ್ಯವಾಗಿದೆ. ಆದರೆ ಹೆಸ್ಕಾಂ ಅಧಿಕಾರಿಗಳು ನಿಮ್ಮ ಭಾಗಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಲೈನ್‍ನಲ್ಲಿ ತಾಂತ್ರಿಕ ಸಮಸ್ಯೆ ನೆಪ ಹೇಳಿ ಕರೆಂಟ್ ಇಲ್ಲವೆಂದು ಹೇಳುತ್ತಿದ್ದಾರೆ. ಆದ್ದರಿಂದ ರೈತರಿಗೆ ತೊಂದರಯಾಗದಂತೆ ಕನಿಷ್ಟ 5-6 ತಾಸು ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು. ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ಕುಮಾರ್ ಚಕ್ರಸಾಲಿ, ನಿಂಗಪ್ಪ ಅಡರಕಟ್ಟಿ, ಕೆ.ಎಮ.ಹೊಸಮನಿ, ಆರ್.ಎಫ್.ಶಿಗ್ಲಿಮಠ, ಬಸವರಾಜ ನರೇಗಲ್ಲ, ಮಂಜುನಾಥ ಮುಳಗುಂದ, ಯಲ್ಲಪ್ಪ ಮರಾಠೆ, ಮಲ್ಲಪ್ಪ ಚಿಂಚಲಿ, ದಾವಲಸಾಬ ಕನಾರ್ಚಿ ಇದ್ದರು.