
ಸಿರವಾರ,ಆ.೦೧- ಸಮೀಪದ ಕ್ಯಾದಿಗೇರಾ ಗ್ರಾಮ ಪಂಚಾಯತಿ ವ್ಯಾಪ್ತಿಯ ತಾಂಡಾ, ದೊಡ್ಡಿ ಹಾಗು ಗ್ರಾಮಗಳಲ್ಲಿ ಪದೇ ಪದೇ ವಿದ್ಯುತ್ ಕಡಿತ ಮಾಡುತ್ತಿದ್ದು, ವಿದ್ಯುತ್ ಅವಲಂಬಿತರ ಬದುಕು ಅಯೋಮಯವಾಗಿದೆ ಎಂದು ಕ್ಯಾದಿಗೇರಾ ಗ್ರಾಮ ಪಂಚಾಯತಿ ಅಧ್ಯಕ್ಷೆ ನೀಲಮ್ಮ ರಾಜಶೇಖರ ರಾಠೋಡ್ ಹಾಗು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಸರಬರಾಜು ಸಮರ್ಪಕವಾಗಿ ಇಲ್ಲದ್ದರಿಂದ ಕುಡಿಯುವ ನೀರಿನ ತೊಂದರೆಯುಂಟಾಗಿದೆ. ರಾತ್ರಿ ವೇಳೆ ಸೊಳ್ಳೆಗಳ ಕಾಟ ವಿಪರೀತವಾಗಿದೆ. ಕಳ್ಳ ಕಾಕರ ಕೈಚಳಕ ಹೆಚ್ಚಾಗಿ ಕಂಡುಬರುತ್ತಿದೆ. ರೈತರ ಪಂಪ್ ಸೆಟ್ ಗಳಿಗೆ ಕರೆಂಟ್ ಇಲ್ಲದೆ ಬೆಳೆಗಳು ಒಣಗಿ ಹೋಗುತ್ತಿವೆ. ಸಂಬಂಧಿಸಿದ ಜೆಇ ಮತ್ತು ಮೇಲಾಧಿಕಾರಿಗಳು ಮಾತ್ರ ಜಾಣ ಮೌನ ವಹಿಸಿದ್ದಾರೆ. ಈ ಬಗ್ಗೆ ಗಮನಕ್ಕೆ ತಂದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ನೀಲಮ್ಮ ರಾಜಶೇಖರ ರಾಠೋಡ್ ಸ್ಥಳೀಯ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಬಂಧಿಸಿದ ಜೆಇ ಮತ್ತು ಅಧಿಕಾರಿಗಳು ಕೆಟ್ಟು ನಿಂತ ಟಿಸಿಗಳನ್ನು ಬದಲಿಸದೆ ಸಾರ್ವಜನಿಕರು ಕಚೇರಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ.
ವಿದ್ಯುತ್ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸದೇ ಹೋದಲ್ಲಿ ರೈತರು ಹಾಗು ಮಹಿಳೆಯರೊಂದಿಗೆ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಎಚ್ಚರಿಸಿದ್ದಾರೆ.