ವಿದ್ಯುತ್ ಶಾಕ್: ಮಹಿಳೆ ಮೃತ್ಯು

ಕಾಸರಗೋಡು, ಜೂ.೪- ವಿದ್ಯುತ್ ಶಾಕ್ ತಗಲಿ ಮಹಿಳೆ ಮೃತಪಟ್ಟ ದಾರುಣ ಘಟನೆ ಬದಿಯಡ್ಕ ಸಮೀಪದ ಏತಡ್ಕ ಅಳಕ್ಕೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.

ಏತಡ್ಕ ಅಳಕ್ಕೆಯ ರಾಮಚಂದ್ರ ಮಣಿಯಾಣಿ ಎಂಬವರ ಪತ್ನಿ ಸುಜಾತಾ (೫೦) ಮೃತಪಟ್ಟವರು. ಉದ್ಯೋಗ ಖಾತರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ದಾರಿ ಮಧ್ಯೆ ಈ ಘಟನೆ ನಡೆದಿದೆ. ದಾರಿ ಮಧ್ಯೆ ಪೊದೆ ಬಳ್ಳಿಗಳ ನಡುವೆ ಹಾದು ಹೋದ ಎಚ್.ಟಿ ವಿದ್ಯುತ್ ತಂತಿಯಿಂದ ಈ ಘಟನೆ ನಡೆದಿದ್ದು, ಶಾಕ್ ತಗಲಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬದಿಯಡ್ಕ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ್ದು, ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಪ್ರದೇಶದಲ್ಲಿ ಕಾಡು ಪೊದೆಗಳ ನಡುವೆ ವಿದ್ಯುತ್ ತಂತಿಗಳು ಹಾದು ಹೋಗಿದ್ದು, ಮಳೆಯಾದುದರಿಂದ ಈ ಹಸಿರು ಬಳ್ಳಿ, ಪೊದೆಗಳ ಮೂಲಕ ವಿದ್ಯುತ್ ಪ್ರವಹಿಸುತ್ತಿದೆ. ಮೂರು ವರ್ಷಗಳ ಹಿಂದೆ ಈ ಪರಿಸರದಲ್ಲಿ ಇನ್ನೊಂದು ಘಟನೆ ನಡೆದಿತ್ತು. ಏತಡ್ಕ ಶಾಲೆಯಿಂದ ಮನೆಗೆ ಮರಳುತ್ತಿದ್ದ ಒಂದನೇ ತರಗತಿ ವಿದ್ಯಾರ್ಥಿನಿ ನೆಲಕ್ಕೆ ಬಿದ್ದಿದ್ದ ತಂತಿ ತುಳಿದು ಮೃತಪಟ್ಟಿದ್ದು, ತಾಯಿ ಅದೃಷ್ಟವಶಾತ್ ಪಾರಾಗಿದ್ದರು.