ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬೆಂಕಿ ಅವಘಡ, ಸ್ಫೋಟಕ ಸದ್ದು

ಅಥಣಿ,ಜ೧೯:ಇಲ್ಲಿನ ೧೧೦ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಗುರುವಾರ ಬೆಂಕಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ರಸ್ತೆ ಪಕ್ಕದಲ್ಲೇ ಇರುವ ಈ ಘಟಕದಲ್ಲಿ ಬೆಂಕಿ ಕೆನ್ನಾಲಿಗೆ ಹರಡಿದ್ದರಿಂದ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.ಸಿಬ್ಬಂದಿ ಕೆಲಸ ಮಾಡುತ್ತಿದ್ದ ಕಚೇರಿಯಿಂದ ಈ ಘಟಕ ದೂರವಿದ್ದ ಕಾರಣ ಯಾವುದೇ ಪ್ರಾಣಿ ಹಾನಿ ಸಂಭವಿಸಿಲ್ಲ. ಆದರೆ, ಬೆಂಕಿಯೊಂದಿಗೆ ಕೇಳಿಬಂದ ಸ್ಫೋಟಕ ಸದ್ದು ಹಾಗೂ ಬೆಂಕಿಯ ತೀವ್ರತೆ ಕಂಡು ಜನ ಬೆಚ್ಚಿಬಿದ್ದರು.
ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿ ಪಟ್ಟಣದಾದ್ಯಂತ ವಿದ್ಯುತ್ ಸರಬರಾಜು ನಿಲ್ಲಿಸಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ರಸ್ತೆಯ ಇಕ್ಕೆಲಗಳಲ್ಲಿಯೂ ಸಂಚಾರ ಬಂದ್ ಮಾಡಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಅರ್ಧ ಗಂಟೆಗೂ ಹೆಚ್ಚು ಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.ವಿಜಯಪುರ ಮಾರ್ಗದ ರಸ್ತೆಗೆ ಹೊಂದಿಕೊಂಡ ವಿದ್ಯುತ್ ಘಟಕದಲ್ಲಿ ಈ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡರಬಹುದು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ನಿಖರ ಕಾರಣ ತಿಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ